ನೆಲಮಂಗಲ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೋಟಗಾರಿಕೆ ಇಲಾಖೆಯಡಿ ವಿವಿಧ ಯೋಜನೆಗಳ ಕರಪತ್ರಗಳನ್ನು ಶಾಸಕ ಎನ್​.ಶ್ರೀನಿವಾಸ್​ ಬಿಡುಗಡೆ ಮಾಡಿದರು. ತಹಸೀಲ್ದಾರ್​ ಮಲ್ಲೇಶ್​.ಬಿ.ಪೂಜಾರ್​, ತಾಪಂ ಇಒ ಡಾ.ಬಿಂದು ಇತರರು ಇದ್ದರು.  
ರಾಜ್ಯ

ಕಾಡುಪ್ರಾಣಿಗಳ ಹಾವಳಿಗೆ ಬೀಳಲಿ ಕಡಿವಾಣ / NELAMANGAL

ಬೆಂಗಳೂರು ಗ್ರಾಮಾಂತರ ಡೆಸ್ಕ್
ನೆಲಮಂಗಲ : ಕ್ಷೇತ್ರದ ಜನರಿಗೆ ಕುಡಿಯುವ ನೀರು, ಆರೋಗ್ಯ ಸೇವೆ,ವಿದ್ಯುತ್​ ಸಮಸ್ಯೆ ಸೇರಿ ಅಗತ್ಯ ಸೌಲಭ್ಯಗಳಿಗೆ ತುರ್ತು ಕ್ರಮವಹಿಸುವುದರ ಜತೆಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಶಾಸಕ ಎನ್​.ಶ್ರೀನಿವಾಸ್​ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆೆ ನೀಡಿದರು.
ತಾಲೂಕು ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಕ್ಷೇತ್ರದಲ್ಲಿ ಕಾಡುಪ್ರಾಣಿಗಳ ಹಾವಳಿ ಅಧಿಕವಾಗುತ್ತಿದ್ದು, ಕಡಿವಾಣ ಹಾಕಬೇಕಿದೆ. ಬಿಸಿಲಿನ ತಾಪಮಾನ ಹೆಚ್ಚಳದಿಂದಾಗಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರಿಗೆ ತೊಂದರೆಯಾಗುವ ಸಂಭವ ಹಾಗೂ ಆರೋಗ್ಯದ ಸಮಸ್ಯೆಗಳಿಗೆ ಒಳಗಾಗುತ್ತಿರುವ ಗ್ರಾಮೀಣಭಾಗದ ಮಹಿಳೆಯರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕಿದೆ. ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಗುಣಮಟ್ಟದ ಆಹಾರ ವಿತರಣೆ ಆಗಬೇಕು. ರೈತರ ಜನಜೀವನ ಸುಧಾರಣೆ ಮಾಡುತ್ತಿರುವ ಜಾನುವಾರುಗಳ ಆರೋಗ್ಯ ಸೇರಿ ಸರ್ಕಾರ ಗ್ಯಾರಂಟಿಗಳ ಸೌಲಭ್ಯ ಫಲಾನುಭವಿಗಳ ಕೈಸೇರುವಂತೆ ನಿಗಾವಹಿಸಬೇಕು ಎಂದರು.
ವಸತಿರಹಿತರಿಗೆ ನಿವೇಶನ: ಜಿಲ್ಲೆಯಲ್ಲಿ ಭೂಮಿಯ ಬೆಲೆ ಅಧಿಕವಾಗಿದೆ, ಜತೆಗೆ ಹೆಚ್ಚಿನ ಸರ್ಕಾರಿ ಭೂಮಿ ಲಭ್ಯವಿಲ್ಲ. ಇರುವ ಸರ್ಕಾರಿ ಜಾಗವನ್ನು ಗುರುತಿಸಿ ಬಡ ಹಾಗೂ ನಿವೇಶನರಹಿತರಿಗೆ ನಿವೇಶನ ನೀಡಿದ್ದಲ್ಲಿ ಸರ್ಕಾರ ಮತ್ತು ಅಧಿಕಾರಿಗಳಿಗೆ ಒಳ್ಳೆಯ ಹೆಸರಲು ಬರಲಿದೆ. ತಾಲೂಕಿನಾದ್ಯಂತ ಆಶ್ರಯ ಯೋಜನೆಗಾಗಿ ಲಭ್ಯವಿರುವ ಜಾಗದ ಮಾಹಿತಿ ಸಂಗ್ರಹಿಸಿದ ಶಾಸಕ ಎಸ್​.ಶ್ರೀನಿವಾಸ್​ ಲಭ್ಯವಿರುವ 139 ಎಕರೆ ಸರ್ಕಾರಿ ಜಾಗದಲ್ಲಿ ವಸತಿ ಬಡಾವಣೆ ನಿರ್ಮಿಸುವಂತೆ ತಾಪಂ ಇಒಗೆ ಶಾಸಕರು ತಿಳಿಸಿದರು.
ಆರೋಪಕ್ಕೆ ಎಡೆಯಾಗದಿರಲಿ : ಅಕ್ಷರ ದಾಸೋಹದ ಆಹಾರ ಧಾನ್ಯಗಳ ದುರ್ಬಳಕೆ ಆರೋಪ ಕೇಳಿಬಂದಿದ್ದು, ಕಡಿವಾಣ ಹಾಕುವಂತೆ ಬಿಇಒಗೆ ತಾಕೀತು ಮಾಡಿದ ಶಾಸಕರು, ಗ್ಯಾಸ್​ ಸಿಲಿಂಡರ್​ ಪೂರೈಕೆ ವೇಳೆ ಸಾರ್ವಜನಿಕರಿಂದ ಹಣವಸೂಲಿ ಆರೋಪಗಳು ಕೇಳಿಬಂದಿದ್ದು, ತಪ್ಪಿತಸ್ಥರ ವಿರುದ್ಧ ಶ್ರೀ ಕ್ರಮವಹಿಸುವಂತೆ ಶಾಸಕರು ತಿಳಿಸಿದರು.
ಬೆಳಗ್ಗೆ ಲೋಡ್​ ಶೆಡ್ಡಿಂಗ್​ ಬೇಡ : ಮಳೆಗಾಲ ಆರಂಭವಾಗುತ್ತಿದ್ದು, ಮಳೆ ಗಾಳಿಯಿಂದಾಗಿ ಉದ್ಭವಿಸುವ ವಿದ್ಯುತ್​ ಸಮಸ್ಯೆಗಳಿಗೆ ತುರ್ತಾಗಿ ಕ್ರಮವಹಿಸಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಟ್ರಾನ್ಸ್​ಫಾರ್ಮರ್​ಗಳ ವ್ಯವಸ್ಥೆ ಮಾಡಿಕೊಳ್ಳಿ. ಬೆಳಗಿನ ವೇಳೆ ಲೋಡ್​ ಶೆಡ್ಡಿಂಗ್​ ಮಾಡಬೇಡಿ. ಇದರಿಂದ ನಗರ ಹಾಗೂ ಗ್ರಾಮೀಣಭಾಗದ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆ ಆಗಲಿದೆ ಎಂದು ಬೆಸ್ಕಾಂನ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ್​ ನಿರ್ದೇಶಿಸಿದರು. ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪಪೂಜಾರ್​, ತಾಪಂ ಇಒ ಡಾ.ಬಿಂದು,ಇನ್​ಸ್ಪೆಕ್ಟರ್​ ಭರತ್​ಗೌಡ, ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷೆ ನಾಗರತ್ನಮ್ಮ, ಕೆಡಿಪಿ ಸದಸ್ಯರಾದ ಲೋಕೇಶ್​, ಇಕ್ಬಾಲ್​ ಇದ್ದರು.
ಸೌಲಭ್ಯ ವಿತರಣಾ ಕಾರ್ಯಕ್ರಮ : ಕಂದಾಯ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್​ ರಾಜ್​ ಇಲಾಖೆಯ ಸಚಿವರನ್ನು ಕರೆತಂದು ಸರ್ಕಾರದ ಎಲ್ಲ ಇಲಾಖೆಗಳಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ವಿತರಣೆಗಾಗಿ ವಿಶೇಷ ಕಾರ್ಯಕ್ರಮ ರೂಪಿಸಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಳ್ಳಬೇಕು. ಈ ಬಗ್ಗೆ ಜಿಲ್ಲಾಡಳಿತದ ಜತೆಗೆ ಚರ್ಚಿಸುವುದಾಗಿ ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.
ಪಿಡಬ್ಲ್ಯುಡಿಯಿಂದ ದಾಖಲೆಯ ಅಭಿವೃದ್ಧಿ : 3 ವರ್ಷಗಳ ಅವಧಿಯಲ್ಲಿ 300 ಕೋಟಿ ರೂ. ಮೀರಿದ ಅನುದಾನವನ್ನು ಕೇವಲ ಪಿಡಬ್ಲ್ಯುಡಿ ಇಲಾಖೆಯೊಂದರಿಂದ ತಂದು ದಾಖಲೆಯ ಅಭಿವೃದ್ಧಿ ಮಾಡಲಾಗುತ್ತಿದೆ. ಮಾಜಿ ಶಾಸಕರ 10 ವರ್ಷ ಅಧಿಕಾರವಧಿಯಲ್ಲಿ ತಂದಿದ್ದ 65 ಕೋಟಿ ರೂ. ಅನುದಾನದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು ಶಾಸಕರು ಗೇಲಿಮಾಡಿದರು.
ಹಳ್ಳಿಕಡೆಗೆ ಅಧಿಕಾರಿಗಳ ತಂಡ : ಗ್ರಾಪಂ ಪಿಡಿಒ, ಆಡಳಿತಾಧಿಕಾರಿಗಳು, ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳು ಸೇರಿ ಪಶುಪಾಲನ ಇಲಾಖೆ ಅಧಿಕಾರಿಗಳ ತಂಡ ವಾರದಲ್ಲಿ 3 ಬಾರಿಯಾದರೂ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಜನಸಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ತಹಸೀಲ್ದಾರ್​ ಮತ್ತು ತಾಪಂ ಇಒಗೆ ತಿಳಿಸಿದರು.
ಗ್ಯಾರಂಟಿ ಮಾಹಿತಿ ಕೊಟ್ಟ ಅಧಿಕಾರಿಗಳು : ಗೃಹಲಕ್ಷಿ$್ಮ ಯೋಜನೆಯಡಿ 45,654 ಫಲಾನುಭವಿಗಳಿಗೆ 29 ಕಂತುಗಳಲ್ಲಿ ಇದುವರೆಗೆ 236.40 ಕೋಟಿ ರೂ. ವಿತರಣೆ, ಶಕ್ತಿ ಯೋಜನೆಯಡಿ 93,500 ಫಲಾನುಭವಿಗಳಿಗೆ ವಾರ್ಷಿಕ 58 ಕೋಟಿ ರೂ. ವಿತರಣೆ ಮಾಡಿರುವ ಮಾಹಿತಿಯನ್ನು ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು.