ಕಲಬುರಗಿಯಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಯೋಜನೆಗಳ ಸಮನ್ವಯ ಸಮಿತಿ ಸಭೆ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಅಧ್ಯಕ್ಷತೆಯಲ್ಲಿ ನಡೆಯಿತು. 
ರಾಜ್ಯ

ಕಲ್ಯಾಣ ಯೋಜನೆ ಕಾಗದಕ್ಕೆ ಸೀಮಿತವಾಗದಿರಲಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಸೂಚನೆ
  • ಮಹಿಳಾ&ಮಕ್ಕಳ ಅಭಿವೃದ್ಧಿ ಇಲಾಖೆ ಸಮನ್ವಯ ಸಮಿತಿ ಸಭೆ
ಕಲಬುರಗಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು ಕಾಗದಕ್ಕೆ ಸೀಮಿತವಾಗದೆ ಫಲಾನುಭವಿಗಳಿಗೆ ತಲುಪಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಜಾಗೃತಿ ಕಾರ್ಯಕ್ರಮಗಳು ಸಭಾಂಗಣಕ್ಕೆ ಸೀಮಿತವಾಗಬಾರದು. ಮುಂದಿನ ದಿನಗಳಲ್ಲಿ ಆಯೋಜಿಸುವ ಪ್ರತಿಯೊಂದು ಜಾಗೃತಿ ಕಾರ್ಯಕ್ರಮದಲ್ಲಿ ಕನಿಷ್ಠ 100 ಜನರು ಕಡ್ಡಾಯ ಭಾಗವಹಿಸುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಕ್ಷೇತ್ರ ಮಟ್ಟಕ್ಕೆ ತೆರಳಿ ಕೆಲಸ ಮಾಡುವ ಅಧಿಕಾರಿಗಳು ತಮ್ಮ ಕಾರ್ಯಕ್ರಮಗಳ ನೈಜತೆ ಸಾಬೀತುಪಡಿಸಲು ಜಿಪಿಎಸ್​ ಆಧಾರಿತ ಸಮಯ ಮತ್ತು ದಿನಾಂಕ ನಮೂದಾಗಿರುವ ಛಾಯಾಚಿತ್ರಗಳೊಂದಿಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಸ್ವಧಾರ ಗೃಹವನ್ನು ತಕ್ಷಣವೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲು ಆದೇಶಿಸಿದ ಅವರು, ಇದರಿಂದ ಸರ್ಕಾರಿ ಹಣ ಉಳಿಕೆ ಜತೆ ನಿವಾಸಿಗಳಿಗೆ ಉತ್ತಮ ಮತ್ತು ಸುರಕ್ಷತ ವಾತಾವರಣ ಸಿಗಲಿದೆ ಎಂದರು.
ಮಹಿಳಾ ಸಹಾಯವಾಣಿ 181 ಹಾಗೂ ಮಕ್ಕಳ ಸಹಾಯವಾಣಿ 1098 ಕುರಿತು ಗ್ರಾಮೀಣ ಭಾಗದಲ್ಲಿ ವ್ಯಾಪಕ ಅರಿವು ಮೂಡಿಸಬೇಕು. ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಟಿಕಾಂಶ ಮತ್ತು ಆರೋಗ್ಯ ಸುಧಾರಣೆಗಾಗಿ ಕೇಂದ್ರದ ಪ್ರಧಾನಮಂತ್ರಿ ಮಾತೃವಂದನ ಯೋಜನೆ ಜಾರಿಯಲ್ಲಿದೆ. ಇದರಡಿ ಮೊದಲ ಮಗುವಿಗೆ 2 ಕಂತುಗಳಲ್ಲಿ 5,000 ಹಾಗೂ ಎರಡನೇ ಮಗು ಹೆಣ್ಣಾಗಿದ್ದರೆ ಒಂದೇ ಕಂತಿನಲ್ಲಿ 6,000 ಧನಸಹಾಯ ನೀಡಲಾಗುತ್ತದೆ. ಈ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್​ ಖಾತೆಗೆ ಜಮೆಯಾಗುತ್ತದೆ. ಸರ್ಕಾರಿ ಹಾಗೂ ಸಾರ್ವಜನಿಕ ಉದ್ದಿಮೆಗಳ ನೌಕರರನ್ನು ಹೊರತುಪಡಿಸಿ ಉಳಿದ ಮಹಿಳೆಯರು ಪ್ರಯೋಜನ ಪಡೆಯಬಹುದು ಎಂದು ಹೇಳಿದರು.
ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಹೆಚ್ಚುವರಿ ಎಸ್​ಪಿ ಮಹೇಶ್​ ಮೇಣ್ಣನವರ್​, ಡಿಯುಡಿಸಿ ಯೋಜನಾ ನಿರ್ದೇಶಕ ಮುನಾವರ್​ ದೌಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಕುಮಾರ ರಾಠೋಡ, ಡಿಎಚ್​ಒ ಡಾ.ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಸರ್ಜನ್​ ರೂಕಿಯಾ ಅಸ್ನ ರಬಾ, ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಪ್ಪ ಇತರರಿದ್ದರು.
"

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಶಾರೀರಿಕ ಬೆಳವಣಿಗೆ, ಅಪೌಷ್ಟಿಕತೆ ಅಳತೆಗೆ ಬಳಕೆ ಮಾಡುವ ತೂಕದ ಯಂತ್ರಗಳು, ಸ್ಟೇಡಿಯೋಮೀಟರ್​ ಹಾಗೂ ಇನ್ಫಾಂಟೋಮೀಟರ್​ ಸ್ಥಿತಿಗತಿ ಪರಿಶೀಲಿಸಿ ದುರಸ್ತಿ ಹಂತದಲ್ಲಿರುವ ಉಪಕರಣಗಳ ಪಟ್ಟಿ ತಯಾರಿಸಿ ಹೊಸ ಉಪಕರಣ ಖರೀದಿಗೆ ವರದಿ ಸಲ್ಲಿಸಬೇಕು.

— > ಇಕ್ರಮ್​ ಶರೀಫ್​ ಜಿಲ್ಲಾಧಿಕಾರಿ