ಹುನಗುಂದ ತಾಲೂಕಿನ ಹಾವರಗಿ ಹಮ್ಮಿಕೊಂಡ ಎಸ್.ಆರ್.ಕಾಶಪ್ಪನವರ ಅವರ 24ನೇ ಪುಣ್ಯಸ್ಮರಣೆ ಕಾರ್ಯಕ್ರಮ ಡಾ.ಪ್ರಸನ್ನ ರೇಣುಕ ಶಿವಾಚಾರ್ಯ ಸ್ವಾಮೀಜಿ, ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ, ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ದೇವಾನಂದ ಕಾಶಪ್ಪನವರ ಇತರರಿದ್ದರು. 
ರಾಜ್ಯ

ವೀರಶೈವ ಲಿಂಗಾಯತ ಒಳಪಂಗಡ ಒಂದಾಗಲಿ

ಪ್ರಮುಖ ಮುಖ್ಯಾಂಶಗಳು

  • ರಂಭಾಪುರಿ ಸ್ವಾಮೀಜಿ ಸಲಹೆ
  • ಎಸ್.ಆರ್.ಕಾಶಪ್ಪನವರ ಪುಣ್ಯ ಸ್ಮರಣೆ
  • ಶಾಸಕ ವಿಜಯಾನಂದಗೆ ಸಚಿವ ಸ್ಥಾನ ನೀಡಿ
ಹುನಗುಂದ: ಮುತ್ಸದ್ದಿ ನಾಯಕ, ಮಾಜಿ ಸಚಿವ ಎಸ್.ಆರ್. ಕಾಶಪ್ಪನವರ ಗ್ರಾಮೀಣ ಜನರ ಕಷ್ಟ, ನೋವು ನಲಿವು ಆಲಿಸುವ ಮೂಲಕ ಜನನಾಯಕರಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ಹಿಡಿದು ಸಚಿವರಾಗುವರೆಗೂ ಕಾರ್ಯನಿರ್ವಹಿಸಿದ್ದಾರೆ ಎಂದು ರಂಭಾಪುರಿ ಮಹಾ ಪೀಠದ ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಹಾವರಗಿ ಗ್ರಾಮದ ಎಸ್‌ಎಂಎಸ್ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡ ಎಸ್.ಆರ್. ಕಾಶಪ್ಪನವರ ಅವರ 24ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಕಾಶಪ್ಪನವರ ಮನೆತನ ಪಂಚಪೀಠದ ಬಗ್ಗೆ ಅಪಾರ ಪ್ರೀತಿ, ಗೌರವ, ಶ್ರದ್ಧೆ ಹೊಂದಿದ್ದಾರೆ. ವೀರಶೈವ ಲಿಂಗಾಯತದಲ್ಲಿ ಎಲ್ಲ ಒಳ ಪಂಗಡಗಳು ಒಂದಾಗಿ ಕೆಲಸ ಮಾಡಬೇಕು ಭಿನ್ನಾಭಿಪ್ರಾಯ ಇರಬಾರದು ಜಾತಿ ವಿಚಾರದಲ್ಲಿ ಧರ್ಮ ಛಿದ್ರವಾಗುತ್ತಿರುವುದು ಖೇದಕರ ಎಂದರು.
ಶ್ರೀಶೈಲ ಮಹಾಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಾತನಾಡಿ, ಎಸ್.ಆರ್.ಕಾಶಪ್ಪನವರ ಧರ್ಮ, ಸಮಾಜ, ರಾಜಕೀಯ ಈ ಮೂರು ಕ್ಷೇತ್ರದಲ್ಲಿ ಅಪಾರ ಸೇವೆ ಮಾಡಿದ್ದಾರೆ. ಅವರ ಹಾದಿಯಲ್ಲಿ ಪುತ್ರ ವಿಜಯಾನಂದ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕರ್ನಾಟಕದಲ್ಲಿ ವೀರಶೈವ ಲಿಂಗಾಯತರು ಎಲ್ಲರೂ ಒಗ್ಗಟ್ಟಾಗಿ ಇದ್ದಾರೆ. ಇದುವರೆಗೂ ಲಿಂಗಾಯತರೇ ಮುಖ್ಯಮಂತ್ರಿಯಾಗುತ್ತಿದ್ದರು. ಎಲ್ಲ ಒಳಪಂಗಡಗಳನ್ನು ಮರೆತು ಮತ್ತೇ ಒಂದಾದರೆ ವಿಜಯಾನಂದ ಕಾಶಪ್ಪನವರ ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಾನಂದ ಕಾಶಪ್ಪನವರ ಪರಿಗಣಿಸಬೇಕು ಒತ್ತಾಯಿಸಿದರು.
ಶಾಸಕ ವಿಜಯಾನಂದ ಕಾಶಪ್ಪನವರು ಮಾತನಾಡಿ, ನಮ್ಮ ಮನೆತನಕ್ಕೆ ಪಂಚಪೀಠಾಧೀಶ್ವರ ಆಶೀರ್ವಾದಿಂದಲೇ ಉತ್ತಮ ಸಂಸ್ಕಾರ ಬಂದಿದೆ. ಹುನಗುಂದ ಮತಕ್ಷೇತ್ರಕ್ಕೆ ಶಿಕ್ಷಣ, ಕೃಷಿ, ಆರೋಗ್ಯ ಸೇರಿ ಅಭಿವೃದ್ಧಿ ಶ್ರಮಿಸಿ ಮುಂದಿನ ದಿನಗಳಲ್ಲಿ ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವುದೇ ನನ್ನ ಗುರಿ ಎಂದು ತಿಳಿಸಿದರು.
ಗಿರಿಸಾಗರದ ರುದ್ರಮುನಿ ಸ್ವಾಮೀಜಿ, ಕೊಲ್ಹಾರದ ಜಗದ್ಗುರು ಯೋಗಿ ಕಲ್ಲಿನಾಥ ದೇವರು, ಸಿದ್ಧನಕೊಳ್ಳದ ಡಾ.ಶಿವಕುಮಾರ ಸ್ವಾಮೀಜಿ, ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು, ಎಸ್‌ಆರ್‌ಕೆ ಪ್ರತಿಷ್ಠಾನ ಗೌರವಾಧ್ಯಕ್ಷೆ ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ನಗರಸಭೆ ಮಾಜಿ ಅಧ್ಯಕ್ಷ ದೇವಾನಂದ ಕಾಶಪ್ಪನವರ ಇತರರಿದ್ದರು.