ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ತೊಗರಿ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಬೇಕು ಎಂದು ಆಗ್ರಹಿಸಿ ಗುಲ್ಬರ್ಗ ದಾಲ್ ಮಿಲ್ಲರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಸಮಿತಿ ಅಧ್ಯಕ್ಷ ಮಂಜುನಾಥ ಅಂಜುಟಗಿ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದರು. ಶರಣಬಸಪ್ಪ ಮಾಚೆಟ್ಟಿ, ವಿಷ್ಣುದಾಸ್ ತಪಡಿಯಾ, ಲಿಂಗಬಸಪ್ಪ ರಾಯನಾಡ್, ಕಿರಣ್ ಚಿಂಚೋಳಿ ಇತರರಿದ್ದರು.
- ಎಪಿಎಂಸಿ ಅಧ್ಯಕ್ಷರಿಗೆ ದಾಲ್ ಮಿಲ್ಲರ್ಸ್ ಸಂಘದ ಪದಾಧಿಕಾರಿಗಳು ಮನವಿ
ಕಲಬುರಗಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ತೊಗರಿ ಟೆಂಡರ್ ಪ್ರಕ್ರಿಯೆ ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ನಡೆಸಬೇಕು, ಆರ್ಇಎಂಎಸ್ ಸಾಫ್ಟ್ವೇರ್ ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಗುಲ್ಬರ್ಗ ದಾಲ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ ಕೋಬಾಳ್ ಹಾಗೂ ಗೌರವ ಕಾರ್ಯದರ್ಶಿ ಹಣಮಂತರಾಯ ತೋಟನಳ್ಳಿ ಆಗ್ರಹಿಸಿದರು.
ಈ ಕುರಿತು ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದ್ದು, ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಆರ್ಇಎಂಎಸ್ ಸಾಫ್ಟ್ವೇರ್ ಜಾರಿಗೆ ತರಲು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ತೊಗರಿ ಟೆಂಡರ್ ಪ್ರಕ್ರಿಯೆಯಲ್ಲಿ ಸಮಸ್ಯೆ ಎದುರಾಗುತ್ತಿದೆ. ಆ.20ರೊಳಗೆ ಸಾಫ್ಟ್ವೇರ್ ಜಾರಿಗೆ ತರದಿದ್ದರೆ ಟೆಂಡರ್ ಹರಾಜಿನಲ್ಲಿ ಭಾಗವಹಿಸದಿರಲು ಅಸೋಸಿಯೇಷನ್ ಸದಸ್ಯರು ನಿರ್ಧರಿಸಿದ್ದಾರೆ ಎಂದು ಹೇಳಿದರು.
ತೊಗರಿ ಟೆಂಡರ್ ಲಾಟ್ವಾರು ನಡೆಸಬೇಕು. ರೈತರು ಯಾವುದೇ ಲಾಟ್ ನಂಬರ್ನ ಟೆಂಡರ್ ರದ್ದುಪಡಿಸಿದಲ್ಲಿ ಮತ್ತೆ ಮಾರಾಟಕ್ಕೆ ಸಿದ್ಧರಾದಾಗ ಅದೇ ಲಾಟ್ ಮತ್ತೊಮ್ಮೆ ಟೆಂಡರ್ ಮೂಲಕವೇ ಮಾರಾಟ ಮಾಡಬೇಕು. ಪ್ರತಿ ಖರೀದಿ ಬಿಲ್ನಲ್ಲಿ ಸಂಬಂಧಿಸಿದ ಲಾಟ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು. ಟೆೆಂಡರ್ಗೆ ದರ ಅಥವಾ ಕೋಟೇಶನ್ ನೀಡುವ ಪ್ರಕ್ರಿಯೆ ಮಧ್ಯಾಹ್ನ 12ರೊಳಗೆ ಪೂರ್ಣಗೊಳಿಸಿ, 12.30ರೊಳಗೆ ಫಲಿತಾಂಶ ಪ್ರಕಟಿಸಬೇಕು ಎಂದು ಮನವಿ ಮಾಡಿದರು.
ಉಪಾಧ್ಯಕ್ಷರಾದ ಶರಣಬಸಪ್ಪ ಮಾಚೆಟ್ಟಿ, ವಿಷ್ಣುದಾಸ್ ತಪಡಿಯಾ, ಜಂಟಿ ಕಾರ್ಯದರ್ಶಿ ಲಿಂಗಬಸಪ್ಪ ರಾಯನಾಡ್, ಖಜಾಂಚಿ ಕಿರಣ ಚಿಂಚೋಳಿ, ಸದಸ್ಯರಾದ ಅರವಿಂದ್ ತೋಷ್ನಿವಾಲ್, ಭೀಮಾಶಂಕರ ಕಲಶೆಟ್ಟಿ, ನಿಜಾಮುದ್ದೀನ್, ರಾಜಶೇಖರ್ ಇಟಗಂಪಳ್ಳಿ, ಉಮೇಶ ಅಡ್ಕಿ ಇತರರಿದ್ದರು.