ಕೊಳ್ಳೇಗಾಲ ತಾಲೂಕಿನ ತಿಮ್ಮರಾಜೀಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಮಕ್ಕಳ ವಿಶೇಷ ಗ್ರಾಮ ಸಭೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು. ರಶ್ಮಿರಾಜು, ನಾಗರಾಜು, ಕೆಂಪರಾಜು, ಚಂದ್ರು, ತಹಸೀಲ್ದಾರ್ ಬಸವರಾಜು ಇತರರು ಇದ್ದರು. 
ರಾಜ್ಯ

ಗ್ರಾಮಸಭೆಯ ಸಲಹೆಗಳು ನಡಾವಳಿಯಾಗಲಿ

ಕೊಳ್ಳೇಗಾಲ: ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ನೀಡಿದ ಸಲಹೆಗಳು ನಡಾವಳಿಯಾಗಿ ಅನುಪಾಲನೆ ಆಗಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ತಾಲೂಕಿನ ತಿಮ್ಮರಾಜೀಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಯಿಂದ ಬುಧವಾರ ಆಯೋಜಿಸಿದ್ದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು. 

ಸರ್ಕಾರ ರಾಜ್ಯಾದ್ಯಂತ ವಿಶೇಷ ಮಕ್ಕಳ ಗ್ರಾಮಸಭೆ ಆಯೋಜಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಶೇಷವಾಗಿ ಗಡಿ ಜಿಲ್ಲೆ ಚಾಮರಾಜನಗರ  ಆಯ್ಕೆ ಮಾಡಿ ಕೊಂಡಿದ್ದು, ಹನೂರು ಭಾಗದ ಮಕ್ಕಳ ಜತೆ ಯೂಟ್ಯೂಬ್ ಮೂಲಕ ಸಂವಾದ ನಡೆಸಿದ್ದಾರೆ. ಮಕ್ಕಳ  ಜತೆ ಚರ್ಚಿಸಿ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ದೇಶದಲ್ಲಿಯೇ ಇದೊಂದು ಮಾದರಿ ಕಾರ್ಯಕ್ರಮ ಎಂದರು.

ಸರ್ಕಾರದ ಯೋಜನೆಗಳು ಎಲ್ಲರಿಗೂ ತಲುಪಬೇಕೆಂಬ ಉದ್ದೇಶಕ್ಕೆ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆ ಮಾಡಲಾಗುತ್ತಿದೆ. ಅದರಂತೆ ಮಕ್ಕಳ ಸಮಸ್ಯೆಗಳನ್ನು ಗ್ರಹಿಸಿ ಪರಿಹಾರ ನೀಡಲು ಪ್ರಪ್ರಥಮ ಬಾರಿಗೆ ಮಕ್ಕಳ ಗ್ರಾಮ ಸಭೆಯನ್ನು ಸರ್ಕಾರ ನಡೆಸಿದೆ ಎಂದರು. 

ಸಂವಾದದಲ್ಲಿ ಆಟದ ಮೈದಾನ, ಸ್ಮಾರ್ಟ್ ಬೋರ್ಡ್, ರಸ್ತೆ, ಸಮರ್ಪಕ ಬಸ್ ವ್ಯವಸ್ಥೆ ನೀಡುವ ಬಗ್ಗೆ ಮನವಿ ಮಾಡಿದರು.

 ತಿಮ್ಮರಾಜೀಪುರ ಗ್ರಾಪಂ ಅಧ್ಯಕ್ಷೆ ರಶ್ಮಿ ರಾಜು, ಸದಸ್ಯರಾದ ನಾಗರಾಜು, ಕೆಂಪರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ಮಕ್ಕಳ ಕಲ್ಯಾಣ ಇಲಾಖೆ ರಕ್ಷಣಾ ಘಟಕದ ಮಹೇಶ್, ತಹಸೀಲ್ದಾರ್ ಬಸವರಾಜು, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಗುರು ಶಾಂತಪ್ಪ ಬೆಳ್ಳುಂಗಡಿ, ಬಿಇಒ ಮಂಜುಳಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ರಾಜೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್ ಇತರರು ಇದ್ದರು.