Let the SIR process be fair. 
ರಾಜ್ಯ

ಎಸ್​ಐಆರ್​ ಪ್ರಕ್ರಿಯೆ ನ್ಯಾಯಸಮ್ಮತವಾಗಿರಲಿ

ಕೋಲಾರ ಡೆಸ್ಕ್
ಮುಳಬಾಗಿಲು: ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆಯಾಗದಂತೆ ವಿಶೆಷ (ಎಸ್​ಐಆರ್​) ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ಜಾರಿಗೊಳಿಸಬೇಕು ಎಂದು ಶಾಸಕ ಸಮೃದ್ಧಿ ವಿ. ಮಂಜುನಾಥ್​ ಹೇಳಿದರು.
ಖಾಸಗಿ ಕಲ್ಯಾಣ ಮಂಟಪದಲ್ಲಿ ಬುಧವಾರ ಜೆಡಿಎಸ್​ನಿಂದ ಹಮ್ಮಿಕೊಂಡಿದ್ದ ಎಸ್​ಐಆರ್​ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ನಕಲಿ, ಮರಣ ಹೊಂದಿದ ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಾಯಿಸಿರುವವರ ವಿವರಗಳನ್ನು ರದ್ದು ಮಾಡಿ, ಅರ್ಹರ ಹೆಸರು ಉಳಿಸುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಗತ್ಯ ಎಂದರು.
ತಮ್ಮ ಹಾಗೂ ತಾಲೂಕು ಮುಖಂಡರ ನಡುವಿನ ಭಿನ್ನಾಭಿಪ್ರಾಯ ಬಗೆಹರಿದಿದ್ದು, ಎಲ್ಲರೂ ಒಂದಾಗಿ ಪಕ್ಷ ಸಂಘಟನೆಗೆ ಮುಂದಾಗಿದ್ದೇವೆ. ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಚುನಾವಣೆಗಳಿಗೆ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು ಎಂದು ಕರೆ ನೀಡಿದರು.
ಜೆಡಿಎಸ್​ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್​.ನಾಗರಾಜ್​ ಮಾತನಾಡಿ, ತಾಲೂಕು ಜನತಾದಳ ಎಂದಿಗೂ ಜಗಳದಳವಾಗಲ್ಲ. ಶಾಸಕರು ಹಾಗೂ ಮುಖಂಡರ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಗೆಹರಿದಿದ್ದು, ಪಕ್ಷವನ್ನು ಸಂಘಟನಾತ್ಮಕವಾಗಿ ಮತ್ತಷ್ಟು ಬಲಪಡಿಸುವುದೇ ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡ ಅವರ ಧರ್ಮಪತ್ನಿ ದಿ.ಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.
ತಾಪಂ ಮಾಜಿ ಅಧ್ಯಕ್ಷ ಎಂ.ಎಸ್​. ಶ್ರೀನಿವಾಸರೆಡ್ಡಿ, ಮಾಜಿ ಸದಸ್ಯ ಡಾ.ಸಿ.ಎನ್​.ಪ್ರಕಾಶ್​, ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್​. ಮುರಳಿ, ಮುಖಂಡರಾದ ಅಂಗೊಂಡಹಳ್ಳಿ ಮುನಿಸ್ವಾಮಿಗೌಡ, ಜಿ.ಎಸ್​. ಜಗದೀಶ್​, ಗ್ಯಾಸ್​ ರಘು, ಡಿ.ವಿ.ಆರ್​.ರಘುಪತಿಗೌಡ, ಅನಂತಪದ್ಮನಾಭರಾವ್​, ಎನ್​.ಆರ್​. ಸತ್ಯಣ್ಣ, ಶಂಕರಪ್ಪ, ಡೆಕ್ಕನ್​ ಬಾಬು, ಲಕ್ಷ್ಮೀನಾರಾಯಣ, ಡಿ.ಸೋಮಣ್ಣ ಇತರರಿದ್ದರು.