ಸಂಪಾದಕೀಯ ಅಂಕಣ  
ರಾಜ್ಯ

ಸಂಪಾದಕೀಯ | ನಿಯಮಾವಳಿ ಕಟ್ಟುನಿಟ್ಟಾಗಲಿ

ರಾಮನಗರ: ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾದಾಪಟ್ಟಣ ಗ್ರಾಮದ ಕಾವೇರಿ ಕ್ರಷರ್ಸ್ ಕ್ವಾರಿಯಲ್ಲಿ ಸಂಭವಿಸಿದ ಭೀಕರ ಬಂಡೆ ಕುಸಿತದ ದುರಂತ ಇಡೀ ನಾಡನ್ನೇ ಬೆಚ್ಚಿಬೀಳಿಸಿದೆ. ಈ ಭೀಕರ ಅಪಘಾತದಲ್ಲಿ ಏಳು ಮಂದಿ ಬಡ ಕಾರ್ವಿುಕರು ಸ್ಥಳದಲ್ಲೇ ಜೀವ ಕಳೆದುಕೊಂಡಿರುವುದು ಮತ್ತು ಆರು ಮಂದಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವುದು ಅತ್ಯಂತ ಆಘಾತಕಾರಿ ಹಾಗೂ ವಿಷಾದನೀಯ ಸಂಗತಿ.

ದಿನಗೂಲಿ ನಂಬಿ, ತುತ್ತು ಅನ್ನಕ್ಕಾಗಿ ದೂರದ ಊರುಗಳಿಂದ ವಲಸೆ ಬಂದಿದ್ದ ಅಮಾಯಕರ ಬದುಕು ಹೀಗೆ ಕ್ಷಣಾರ್ಧದಲ್ಲಿ ಮಣ್ಣುಪಾಲಾಗಿರುವುದು ವ್ಯವಸ್ಥೆಯ ಕ್ರೂರತೆಗೆ ಸಾಕ್ಷಿಯಾಗಿದೆ. ಇದು ಕ್ವಾರಿಗಳಲ್ಲಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ನಡೆಸಲಾಗುತ್ತಿರುವ ಬೇಜವಾಬ್ದಾರಿ ಚಟುವಟಿಕೆಗಳಿಗೆ ಹಿಡಿದ ಕನ್ನಡಿಯಾಗಿದೆ. ರಾಜ್ಯದಲ್ಲಿ ಕಾನೂನುಬಾಹಿರ ಮತ್ತು ಅಸುರಕ್ಷಿತ ಗಣಿಗಾರಿಕೆ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ಈ ಗಣಿಗಾರಿಕೆ ಪ್ರದೇಶದಲ್ಲಿ ಸಡಿಲಗೊಂಡಿದ್ದ ಬಂಡೆಗಳ ಬಗ್ಗೆ ಕಾರ್ವಿುಕರಿಗೆ ಮುನ್ನೆಚ್ಚರಿಕೆ ನೀಡದೇ ಇರುವುದು ಬೇಜವಾಬ್ದಾರಿತನ. ಕತ್ತಲೆ ಕರಗಿ ಬೆಳಕಾಗುವ ಮುನ್ನವೇ ಕಾರ್ವಿುಕರನ್ನು ಅಪಾಯಕಾರಿ ಕೆಲಸಕ್ಕೆ ಇಳಿಸಿರುವುದು ಲಾಭಕೋರತನದ ಪರಮಾವಧಿ.

ಪ್ರತಿ ಬಾರಿ ಇಂತಹ ದೊಡ್ಡ ದುರಂತಗಳು ಸಂಭವಿಸಿದಾಗಲೂ ಸರ್ಕಾರ ತಕ್ಷಣವೇ ಮೃತರ ಕುಟುಂಬಗಳಿಗೆ ಆರ್ಥಿಕ ಪರಿಹಾರ ಘೊಷಿಸಿ ಕೈತೊಳೆದುಕೊಳ್ಳುತ್ತದೆ. ಕಳೆದುಹೋದ ಆ ಜೀವಗಳನ್ನು ಪರಿಹಾರ ಧನದಿಂದ ಮರಳಿ ತರಲು ಸಾಧ್ಯವೇ? ಗಣಿ, ಕ್ರಷರ್ಸ್ ಮಾಲೀಕರ ಧನದಾಸೆಗೆ ಬಡವರ ಪ್ರಾಣ ಬಲಿಯಾಗುತ್ತಿರುವುದನ್ನು ಕೇವಲ ಪರಿಹಾರ ನೀಡುವ ಮೂಲಕ ಮುಚ್ಚಿಹಾಕಲಾಗದು. ಈ ಘಟನೆಗೆ ನೇರವಾಗಿ ಕಾರಣರಾದ ಕ್ವಾರಿ ಮಾಲೀಕರು, ವ್ಯವಸ್ಥಾಪಕರು ಹಾಗೂ ಇದರ ಮೇಲ್ವಿಚಾರಣೆ ನಡೆಸಬೇಕಾಗಿದ್ದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.

ರಾಜ್ಯದ ವಿವಿಧೆಡೆ ನೂರಾರು ಅಕ್ರಮ ಕ್ವಾರಿಗಳು ಯಾವುದೇ ಹಿಂಜರಿಕೆಯಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ. ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗಣಿ ಮಾಫಿಯಾ ನಡುವಿನ ಅಪವಿತ್ರ ಮೈತ್ರಿಯೇ ಇಂತಹ ಅಕ್ರಮಗಳಿಗೆ ದಾರಿ ಮಾಡಿಕೊಡುತ್ತಿದೆ. ಸದನದಲ್ಲಿ ಇಂತಹ ಅಸುರಕ್ಷಿತ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದರೂ, ವಾಸ್ತವದಲ್ಲಿ ಯಾವುದೇ ಕಟ್ಟುನಿಟ್ಟಿನ ಕ್ರಮಗಳು ಜರುಗುತ್ತಿಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ರಾಜ್ಯಾದ್ಯಂತ ಇರುವ ಎಲ್ಲಾ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಘಟಕಗಳ ಸುರಕ್ಷತೆಯ ಬಗ್ಗೆ ಕಟ್ಟುನಿಟ್ಟಿನ ಆಡಿಟ್ (ಸುರಕ್ಷತಾ ತಪಾಸಣೆ) ನಡೆಸಬೇಕು. ನಿಯಮಬಾಹಿರವಾಗಿ ಬೆಟ್ಟಗಳನ್ನು ಕೊರೆಯುವ, ಸ್ಪೋಟಕಗಳನ್ನು ಬಳಸುವ ಮತ್ತು ಸುರಕ್ಷತಾ ಪರಿಕರಗಳನ್ನು ನೀಡದೆ ಕಾರ್ವಿುಕರನ್ನು ದುಡಿಸಿಕೊಳ್ಳುವ ಕೇಂದ್ರಗಳ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು.

ಪ್ರತಿ ಕ್ವಾರಿಯಲ್ಲೂ ದಿನನಿತ್ಯ ತಾಂತ್ರಿಕ ಪರಿಶೀಲನೆ ನಡೆಸಿ, ಬಂಡೆಗಳು ಕುಸಿಯುವ ಸಾಧ್ಯತೆಗಳಿವೆಯೇ ಎಂಬುದನ್ನು ಖಚಿತಪಡಿಸಿಕೊಂಡೇ ಕೆಲಸ ಆರಂಭಿಸಲು ನಿಯಮ ರೂಪಿಸಬೇಕು. ಅಕ್ರಮ ಮತ್ತು ಅಸುರಕ್ಷಿತ ಗಣಿಗಾರಿಕೆಗೆ ಬ್ರೇಕ್ ಹಾಕದಿದ್ದರೆ, ಅಮಾಯಕರ ಪ್ರಾಣಹಾನಿ ಆಗುತ್ತಲೇ ಇರುತ್ತದೆ, ಇಂತಹ ಭೀಕರ ದುರಂತಗಳು ಮರುಕಳಿಸುತ್ತಲೇ ಇರುತ್ತವೆ. ಸರ್ಕಾರದ ಇಚ್ಛಾಶಕ್ತಿ ಕೇವಲ ಹೇಳಿಕೆಗಳಿಗೆ ಸೀಮಿತವಾಗದೆ, ಕಟ್ಟುನಿಟ್ಟಿನ ನಿಯಮ ಜಾರಿಯ ಮೂಲಕ ಸಾಬೀತಾಗಬೇಕಿದೆ.