ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಬುಧವಾರ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ, ರಾಜ್ಯದ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ದೀರ್ಘಕಾಲದ ರಾಜಕೀಯ ಅನುಭವ, ಸಂಘಟನಾ ಚಾತುರ್ಯ ಮತ್ತು ಆಡಳಿತಾತ್ಮಕ ಹಿಡಿತ ಹೊಂದಿರುವ ಅವರು ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಮುಖ್ಯವಾಗಿ ಮೂರು ವರ್ಷಗಳ ಕಾಲ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಶಿವಕುಮಾರ್, ಆಡಳಿತದಲ್ಲಿ ಹೊಸತನ ಮತ್ತು ಉತ್ಸಾಹ ತುಂಬಲು ಸಜ್ಜಾಗಿದ್ದಾರೆ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗಿದೆ. ಆದರೆ, ಪ್ರಸಕ್ತ ವಿಧಾನಸಭೆಯ ಅವಧಿಯಲ್ಲಿ ಅವರಿಗೆ ಉಳಿದಿರುವುದು ಎರಡು ವರ್ಷಕ್ಕಿಂತಲೂ ಕಡಿಮೆ ಅವಧಿ. ಈ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿ. ಎಲ್ಲ ಭಾಗಗಳಿಗೂ ಆದ್ಯತೆ ದೊರೆತು, ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಲಿ. ಪಕ್ಷದ ಒಳಗೆ ಮತ್ತು ಆಡಳಿತದಲ್ಲಿ ಪ್ರಭಾವಿ ನಾಯಕರಾಗಿರುವ ಕಾರಣ, ಅಧಿಕಾರಶಾಹಿ ಮೇಲೆ ಬಿಗಿ ಹಿಡಿತ ಸಾಧಿಸಿ, ಯೋಜನೆಗಳು ಜನರಿಗೆ ಶೀಘ್ರವಾಗಿ ತಲುಪುವಂತೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕಿದೆ.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಹಲವು ಅವಕಾಶಗಳು ಇರುವಂತೆಯೇ, ತಕ್ಷಣವೇ ಎದುರಿಸಬೇಕಾದ ಗಂಭೀರ ಸವಾಲುಗಳೂ ಇವೆ. ಈ ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಬಾಕಿ ಉಳಿದಿರುವ ಮೆಟ್ರೋ ಯೋಜನೆಗಳ ವೇಗವರ್ಧನೆ, ಸಂಚಾರ ಸಿಕ್ಕು ಸಮಸ್ಯೆಯ ನಿವಾರಣೆ ಮತ್ತು ನಗರದ ಮೂಲಸೌಕರ್ಯಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಇದು ಅವರಿಗೆ ದೊಡ್ಡ ಅವಕಾಶ. ಈ ಹಿಂದೆ ಜಲಸಂಪನ್ಮೂಲ ಇಲಾಖೆಯನ್ನೂ ಶಿವಕುಮಾರ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಮೇಕೆದಾಟು ಯೋಜನೆ ಹಾಗೂ ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳನ್ನು ಕಾನೂನಾತ್ಮಕವಾಗಿ ಮತ್ತು ತಾಂತ್ರಿಕವಾಗಿ ಮುನ್ನಡೆಸಲು ಅವರಿಗೆ ಇದೊಂದು ಸೂಕ್ತ ವೇದಿಕೆ. ಕರ್ನಾಟಕವನ್ನು ಜಾಗತಿಕ ಹೂಡಿಕೆಯ ಪ್ರಮುಖ ಕೇಂದ್ರವನ್ನಾಗಿ ಮಾಡಲು, ಎರಡನೇ ಹಂತದ ನಗರಗಳಾದ ಮೈಸೂರು, ಹುಬ್ಬಳ್ಳಿ, ಮಂಗಳೂರುಗಳಲ್ಲಿ ಹೂಡಿಕೆ ಹೆಚ್ಚಿಸಲು ಐಟಿ-ಬಿಟಿ ಹಾಗೂ ಉತ್ಪಾದನಾ ವಲಯಗಳಲ್ಲಿ ಹೊಸ ನೀತಿಗಳನ್ನು ತರಬೇಕಿದೆ.
ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲು ಭಾರಿ ಪ್ರಮಾಣದ ಮೊತ್ತದ ಅಗತ್ಯವಿದೆ. ಈ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರಿಸುತ್ತಲೇ, ಮತ್ತೊಂದೆಡೆ ರಾಜ್ಯದ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆಯಾಗದಂತೆ ಆರ್ಥಿಕ ಶಿಸ್ತು ಕಾಪಾಡುವುದು ಅವರ ಮುಂದಿರುವ ಅತಿ ದೊಡ್ಡ ಸವಾಲು. ಜಿಎಸ್ಟಿ ಪಾಲು, ಬರ ಪರಿಹಾರ ಅಥವಾ ನೀರಾವರಿ ಯೋಜನೆಗಳ ಅನುಮತಿಗಾಗಿ ಕೇಂದ್ರ ಸರ್ಕಾರದೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿ, ಸಮನ್ವಯ ಸಾಧಿಸಿ ರಾಜ್ಯಕ್ಕೆ ಸಿಗಬೇಕಾದ ಹಕ್ಕನ್ನು ಪಡೆದುಕೊಳ್ಳಬೇಕಾದ ರಾಜತಾಂತ್ರಿಕ ಸವಾಲನ್ನು ಯಶಸ್ವಿಯಾಗಿ ನಿರ್ವಹಿಸಬೇಕಿದೆ. ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ತಪ್ಪಿಸಲು ಈಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕಾದುದು ಅಪೇಕ್ಷಣಿಯ. ಈ ನಿಟ್ಟಿನಲ್ಲಿ ಸಚಿವರು ಹಾಗೂ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸುವುದು ಒಳಿತು. ಶೀಘ್ರವೇ ಪೂರ್ಣ ಪ್ರಮಾಣದ ಸಚಿವ ಸಂಪುಟವನ್ನು ರಚಿಸಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ನಿಯೋಜಿಸುವ ಮೂಲಕ ಆಡಳಿತ ಯಂತ್ರ ಚುರುಕುಗೊಳಿಸಬೇಕಿದೆ. ಈ ಕಾರ್ಯದಲ್ಲಿ ಅವರು ಯಶಸ್ವಿಯಾಗುತ್ತಾರೆ ಎಂದು ಆಶಿಸೋಣ.