ಚನ್ನರಾಯಪಟ್ಟಣದ ವಳಗೇರಮ್ಮ ದೇವಸ್ಥಾನದಲ್ಲಿ ರಥದ ಮನೆಯನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ಕೋಟೆ ಮೋಹನ್, ಜೈದೀಪ್‌ಬಾಲಕೃಷ್ಣ, ಬಾಬು, ಸಿ.ಎನ್.ದೇವರಾಜು ಇತರರು ಇದ್ದರು. 
ರಾಜ್ಯ

ವಳಗೇರಮ್ಮ ದೇವಸ್ಥಾನದ ಜಮೀನು ಆಸ್ತಿಯಾಗೇ ಉಳಿಯಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ
  • ವಳಗೆರಮ್ಮ ದೇವಸ್ಥಾನದ ಆವರಣ
ಚನ್ನರಾಯಪಟ್ಟಣ: ಪಟ್ಟಣದ ಗ್ರಾಮದೇವತೆ ವಳಗೇರಮ್ಮ ದೇವಸ್ಥಾನದ ಜಮೀನು ದೇವಾಲಯದ ಆಸ್ತಿಯಾಗಿಯೇ ಉಳಿಯಲಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಪಟ್ಟಣದ ವಳಗೆರಮ್ಮ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ರಥದ ಮನೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು 4 ಎಕರೆ ಜಮೀನು ಪಟ್ಟಣದ ಹೃದಯ ಭಾಗದಲ್ಲಿದ್ದು, ದೇವಾಲಯದ ಅಭಿವೃದ್ಧಿಗೆ ಈ ಜಮೀನು ಬಳಕೆಯಾಗಬೇಕು. ದೇವಸ್ಥಾನದ ಜಮೀನನ್ನು ಅನ್ಯರ ಪಾಲಾಗದಂತೆ ರಕ್ಷಿಸುವುದು ಅತ್ಯಂತ ಮಹತ್ವದ ವಿಷಯವಾಗಿದೆ. ದೇವಸ್ಥಾನದ ಆಸ್ತಿಗಳನ್ನು ಯಾರೂ ದುರುಪಯೋಗಪಡಿಸಿ ಕೊಳ್ಳಬಾರದು. ದೇವಾಲಯ ಅಭಿವೃದ್ಧಿಗೆ ಇರುವ ಜಮೀನನ್ನು ಆಡಳಿತ ಮಂಡಳಿ ರಕ್ಷಣೆ ಮಾಡಬೇಕು. ಜತೆಗೆ ದೇವಾಲಯದ ಜಮೀನು ಎಂದು ನಾಮಫಲಕ ಅಳವಡಿಸಬೇಕು ಎಂದು ಸಲಹೆ ನೀಡಿದರು.
ವಳಗೆರಮ್ಮ ದೇವತೆಗೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಭಕ್ತರ ಅನುಕೂಲಕ್ಕಾಗಿ ರಸ್ತೆ, ದೇವಾಲಯ ಆವರಣದಲ್ಲಿ ನೆಲಹಾಸು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ದೇವಾಲಯದ ಸೇವಾ ಸಮಿತಿ ಮನವಿಯಂತೆ ಪ್ರತಿ ವರ್ಷ ನಡೆಯುವ ಜಾತ್ರೆಗೆ ಪುರಸಭಾ ವತಿಯಿಂದ ಅಧಿಕೃತವಾಗಿ ಒಂದು ಲಕ್ಷ ರೂ.ಅನುದಾನವನ್ನು ನೀಡಲಾಗುವುದು. ಜತೆಗೆ ಊಟದ ಮನೆ, ದೇವಸ್ಥಾನದ ಛಾವಣಿಗೆ ಶೀಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಸ್ವಚ್ಛ ಭಾರತ್ ಯೋಜನೆಯಡಿ ದೇವಸ್ಥಾನ ಆವರಣದಲ್ಲಿ ಶೌಚಗೃಹ ಮತ್ತು ಸ್ನಾನದ ಗೃಹ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದು ಪುರಸಭಾ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಪುರಸಭಾ ಮುಖ್ಯಾಧಿಕಾರಿ ಆರ್.ಯತೀಶ್‌ಕುಮಾರ್, ಮಾಜಿ ಅಧ್ಯಕ್ಷ ಕೋಟೆಮೋಹನ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುರೇಶ್, ಮಾಜಿ ಸದಸ್ಯರಾದ ಸತ್ಯನಾರಾಯಣ, ಗಣೇಶ್, ಮುಖಂಡರಾದ ಜೈದೀಪ್ ಬಾಲಕೃಷ್ಣ, ಶಾಮಿಯಾನ ರಘು, ರಾಜು, ಗುಡಿ ಗೌಡರ ವಂಶಸ್ಥರಾದ ಸಿ.ಎನ್.ದೇವರಾಜು, ಬಾಬು ನಾಗರಾಜು, ಸಿ.ಡಿ.ನಾಗೇಂದ್ರ, ಉಮೇಶ್, ಧೀರಜ್, ವಕೀಲ ನವೀನ್‌ಕುಮಾರ್, ಮನೋಹರ್ ಇತರರಿದ್ದರು.