Let the differently-abled join the mainstream. 
ರಾಜ್ಯ

ಅಂಗವಿಕಲರು ಮುಖ್ಯವಾಹಿನಿಗೆ ಬರಲಿ

ತುಮಕೂರು ಡೆಸ್ಕ್
ಶಿರಾ: ಅಂಗವಿಕಲರನ್ನು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸಬಲಗೊಳಿಸುವುದು ಸರ್ಕಾರದ ಕರ್ತವ್ಯ. ಅಂಗವಿಕಲತೆಗೆ ಹಲವು ಕಾರಣಗಳಿದ್ದು, ಶುದ್ಧ ಕುಡಿಯುವ ನೀರಿನ ಕೊರತೆಯೂ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಕವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ತಾಪಂ ಅನುದಾನದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರಿಗೆ ತ್ರಿಚಕ್ರ ಮೋಟರ್​ ವಾಹನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಹೇಮಾವತಿ ನೀರಿನ ಯೋಜನೆಯನ್ನು ಜಾರಿಗೊಳಿಸಲಾಗಿದೆ, ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಶಿಕ್ಷಣ, ಉದ್ಯೋಗ ಹಾಗೂ ಸಂಚಾರಕ್ಕೆ ಅನುಕೂಲವಾಗುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕಿನ ಒಟ್ಟು 19 ಅಂಗವಿಕಲರಿಗೆ ತ್ರಿಚಕ್ರ ಮೋಟರ್​ ವಾಹನ ವಿತರಿಸಲಾಯಿತು. ಕಾಡುಗೊಲ್ಲ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾರೋಗೇರೆ ಎಂ.ಮಹೇಶ್​, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಪ್ರಧಾನ್​ ನಾಗರಾಜು ಆರ್​, ತುಮಕೂರು ಅರಣ್ಯ ಉಪಸಂರಕ್ಷಣಾಧಿಕಾರಿ ಶಶಿಧರ್​ ಜಿ.ಆರ್​, ತಾಪಂ ಇಒ ಹರೀಶ್​, ಡಿಸಿಸಿ ಬ್ಯಾಂಕ್​ನ ತಾಲೂಕು ಪ್ರತಿನಿಧಿ ರವಿ, ನಗರಾಭಿವೃದ್ಧಿ ಆಯುಕ್ತ ರುದ್ರೇಶ್​ ಇತರರು ಇದ್ದರು.