Let students learn about economics.
ಹುಳಿಯಾರು: ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ದೈನಂದಿನ ಬದುಕಿನ ಆರ್ಥಿಕ ಬದಲಾವಣೆಗಳನ್ನು ಅರಿತುಕೊಳ್ಳಬೇಕು ಎಂದು ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಸ್. ಕುಮಾರಸ್ವಾಮಿ ಹೇಳಿದರು.
ಹುಳಿಯಾರಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ಅರ್ಥಶಾಸ್ತ್ರ ಮತ್ತು ಜೀವನ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಬಾಲ್ಯದಲ್ಲೇ ಉಳಿತಾಯದ ಅಭ್ಯಾಸ ಬೆಳೆಸಿಕೊಳ್ಳಬೇಕು. ಹಣದ ಮೌಲ್ಯವನ್ನು ಅರ್ಥಮಾಡಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಆರ್ಥಿಕವಾಗಿ ಸದೃಢ ಜೀವನ ನಡೆಸಲು ಸಾಧ್ಯ ಎಂದರು. ಕಾರ್ಯಕ್ರಮದ ಸಂಯೋಜಕಿ ಜಾಹ್ನವಿ ಗೌಡ ಮಾತನಾಡಿ, ಆದಾಯ, ಖರ್ಚು, ಉಳಿತಾಯ ಮತ್ತು ಹೂಡಿಕೆಗಳ ಬಗ್ಗೆ ಸರಿಯಾದ ಅರಿವಿದ್ದರೆ ಜೀವನ ಸುಸೂತ್ರವಾಗುತ್ತದೆ ಎಂದರು.
ನಿವೃತ್ತ ಪ್ರಾಧ್ಯಾಪಕಿ ಬಿ.ಎಂ.ಪ್ರೇಮಾ ಮಾತನಾಡಿ, ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಹಣಕಾಸು ನಿರ್ವಹಣೆ, ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಡಿಜಿಟಲ್ ವ್ಯವಹಾರಗಳ ಅರಿವು ಅತ್ಯಗತ್ಯವಾಗಿದೆ ಎಂದರು.