ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾವೇದಿಕೆಯನ್ನು ಜಿ.ಮಲ್ಲೇಶ್ ಉದ್ಘಾಟಿಸಿದರು. ಡಾ.ಪಿ.ಮಹದೇವಮ್ಮ, ಜೀವಿತಾ, ಮಲ್ಲುಸ್ವಾಮಿ, ಮಾರಿಯಖಾನಂ, ಸಂಜನಾ ಮಲ್ಲೇಶ್ ಇದ್ದರು. 
ರಾಜ್ಯ

ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಸ್ಕೃತಿಯ ಭಾಗವಾಗಲಿ

ಪ್ರಮುಖ ಮುಖ್ಯಾಂಶಗಳು

  • ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಜಿ.ಮಲ್ಲೇಶ್
  • ಜೆಎಸ್‌ಎಸ್ ಅನುಭವ ಮಂಟಪ

ಗುಂಡ್ಲುಪೇಟೆ:

ಜನಪದ ಕಲೆಗಳ ತವರೂರಾಗಿರುವ ಜಿಲ್ಲೆಯ ವಿದ್ಯಾರ್ಥಿಗಳು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಆರಂಭದಿಂದಲೇ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಜಿ.ಮಲ್ಲೇಶ್ ಸಲಹೆ ನೀಡಿದರು.

ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಉದ್ಘಾಟಿಸಿ ಮಾತನಾಡಿದರು. ಮಲೆಮಹದೇಶ್ವರ, ಸಿದ್ದಪ್ಪಾಜಿ, ಮಂಟೇಸ್ವಾಮಿ ಮುಂತಾದ ಪವಾಡ ಪುರುಷರು ನೆಲೆಸಿದ ಜಿಲ್ಲೆಯಲ್ಲಿ ನಟನೆ ಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿದ ವರನಟ ಡಾ.ರಾಜಕುಮಾರ್ ಸೇರಿ ಹಲವು ಕಲಾವಿದರು ಜನಿಸಿದ್ದಾರೆ. ಅಲ್ಲದೆ ಜಿ.ಪಿ.ರಾಜರತ್ನಂ ಗುಂಡ್ಲುಪೇಟೆಯವರು ಎಂಬ ಹೆಮ್ಮೆ ಇದೆ. ಈ ಎಲ್ಲ ಕಾರಣಗಳಿಗಾಗಿ ವಿದ್ಯಾರ್ಥಿಗಳು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಭಾಗವಾಗಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ನಿರಾಸಕ್ತಿಯಿಂದಾಗಿ ಆತ್ಮವಿಶ್ವಾಸದ ಕೊರತೆ ಉಂಟಾಗುತ್ತಿದ್ದು ದೇಹದ ಆರೋಗ್ಯದ ಬಗ್ಗೆ ಕಾಳಜಿಯೇ ಇಲ್ಲವಾಗಿದೆ. ಜತೆಗೆ ವೈವಾಹಿಕ ಜೀವನದ ಬಗ್ಗೆಯೂ ನಿರ್ಲಕ್ಷೃ ವಹಿಸಲಾಗುತ್ತಿದೆ. ಇದರಿಂದ ಭಾರತ ಯುವ ದೇಶ ಎಂದು ಕರೆಸಿಕೊಂಡರೂ ಯುವಕರು ಯಾವ ಕ್ಷೇತ್ರವನ್ನು ಪ್ರತಿನಿಧಿಸುವ ಗೋಜಿಗೆ ಹೋಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು, ಗುರುರಾಜ ಕರ್ಜಗಿ ಸ್ಫೂರ್ತಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರ್ರಾಂಶುಪಾಲೆ ಡಾ.ಪಿ.ಮಹದೇವಮ್ಮ, ಸಹ ಪ್ರಾಧ್ಯಾಪಕಿ ಜೀವಿತಾ, ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲುಸ್ವಾಮಿ, ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿಗಳಾದ ಮಾರಿಯಖಾನಂ, ಸಂಜನಾ ಮಲ್ಲೇಶ್ ಹಾಜರಿದ್ದರು.