ಬೆಂಗಳೂರು : ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮೊದಲ ಬಾರಿಗೆ ಶಾಲೆಗೆ ಸೇರಿದ ದಿನವಾದ ನ.7ನ್ನು ರಾಜ್ಯ ವಿದ್ಯಾರ್ಥಿ ದಿನಾಚರಣೆಯನ್ನಾಗಿ ಘೋಷಿಸಿ ಆಚರಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಶಿವರಾಜು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರ ಗ್ರಂಥಾಲಯದ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣವು ಮಾನವ ಜೀವನವನ್ನು ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಸಾಧನ ಎಂಬ ಸಂದೇಶವನ್ನು ಅಂಬೇಡ್ಕರ್ ಸಾರಿದ್ದಾರೆ. ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎಂಬುದನ್ನು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ. ಅತ್ಯಧಿಕ ಪದವಿಗಳನ್ನು ಪಡೆದ ಅಂಬೇಡ್ಕರ್ ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾದರಿ ಹಾಗೂ ಸ್ಫೂರ್ತಿಯಾಗಿದ್ದಾರೆ. ಮಹಾರಾಷ್ಟ್ರದ ಮಾದರಿಯಲ್ಲಿ ಕರ್ನಾಟಕದಲ್ಲೂ ನ.7ನ್ನು ವಿದ್ಯಾರ್ಥಿ ದಿನವನ್ನಾಗಿ ಘೋಷಿಸಲು ಸರ್ಕಾರಕ್ಕೂ ಮನವಿ ಮಾಡಲಾಗುವುದು. ಬೆಂವಿವಿಯಲ್ಲಿ ವಿದ್ಯಾರ್ಥಿ ದಿನಾಚರಣೆ ಆರಂಭವಾಗಿರುವುದು ಹೊಸ ಪರ್ವಕ್ಕೆ ನಾಂದಿಯಾಗಿದ್ದು, ವಿದ್ಯಾರ್ಥಿಗಳು ಅಂಬೇಡ್ಕರ್ ಆದರ್ಶಗಳನ್ನು ಮೈಗೂಡಿಸಿಕೊಂಡು ಅಧ್ಯಯನ ಮತ್ತು ಸಂಶೋಧನೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಸಿಂಡಿಕೇಟ್ ಸದಸ್ಯರಾದ ಬಿ.ಡಿ.ಗಂಗರಾಜು, ಡಾ.ಲೋಕೇಶ್ ರಾಮ್, ಪ.ಜಾ., ಪ.ಪಂ. ಕೋಶದ ವಿಶೇಷಾಧಿಕಾರಿ ಪ್ರೊ.ಜಿ.ಕೃಷ್ಣಮೂರ್ತಿ, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀನಿವಾಸ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಜ್ಞಾನಾರ್ಜನೆ ಮತ್ತು ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವುದರ ಜೊತೆಗೆ ಅವರ ಸಮಸ್ಯೆಗಳ ಕುರಿತು ಚರ್ಚಿಸಲು ವಿದ್ಯಾರ್ಥಿ ದಿನಾಚರಣೆ ಸೂಕ್ತ ವೇದಿಕೆಯಾಗಲಿದೆ.ಪ್ರೊ.ರಘುನಂದನ್, ಅಂಬೇಡ್ಕರ್ ಗ್ರಂಥಾಲಯದ ಗ್ರಂಥಪಾಲಕ