ಚನ್ನಪಟ್ಟಣ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಪದವಿ ಪೂರ್ವ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಮರಿಸ್ವಾಮಿ ಚಾಲನೆ ನೀಡಿದರು. ಸತೀಶ್ ಬಾಬು, ದೊಡ್ಡಬೋರಯ್ಯ, ಪ್ರದೀಪ್,ರಾಮಯ್ಯ, ಇತರರು ಇದ್ದರು.  
ರಾಜ್ಯ

ಕ್ರೀಡೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಲಿ

ಚನ್ನಪಟ್ಟಣ : ಕಠಿಣ ಪರಿಶ್ರಮ ಹಾಗೂ ಶ್ರದ್ಧೆ ಇದ್ದರೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಮರಿಸ್ವಾಮಿ ತಿಳಿಸಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ 2026-27 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕಠಿಣ ಪರಿಶ್ರಮದಿಂದ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಸಾವಿರಾರು ಮಂದಿ ನಮ್ಮ ದೇಶದಲ್ಲಿದ್ದಾರೆ. ಅವರ ಸಾಧನೆ ಆದರ್ಶವಾಗಿಟ್ಟುಕೊಂಡು ಮಕ್ಕಳು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾಗಬೇಕು.
ಕ್ರೀಡೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿಯೂ ಮೀಸಲಾತಿ ದೊರೆಯುತ್ತದೆ. ಇದನ್ನು ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕೆಂದು ಸೂಚಿಸಿದರು.
ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೋತ್ತಿಪುರ ಜಿ.ಶಿವಣ್ಣ ಮಾತನಾಡಿ, ಕ್ರೀಡೆ ನಮ್ಮ ಬದುಕಿನ ಅವಿಭಾಜ್ಯ ಅಂಗ. ದೈಹಿಕ ಕಸರತ್ತು ಪ್ರತಿನಿತ್ಯ ಮಾಡಿ ದೇಹವನ್ನು ಸದೃಢ ಗೊಳಿಸಲು, ಸಶಕ್ತ ಶರೀರದಿಂದ ಧೈರ್ಯ, ಸಾಹಸಶೀಲತ್ವ ಮತ್ತು ನಿರ್ಭಯತೆ ಬೆಳೆಸಿಕೊಳ್ಳಲು ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಸಹಕಾರಿ. ಕ್ರೀಡೆಗಳಲ್ಲಿ ಭಾಗವಹಿಸದೆ ಇದ್ದರೆ ಬಾಲ್ಯ ಕಳೆದುಕೊಂಡಂತೆ. ಆಯಾ ಕಾಲದಲ್ಲಿ ಏನು ಅನಿವಾರ್ಯವೋ ಅದನ್ನು ಅನುಸರಿಸುತ್ತಾ ಸಾಗುವುದೇ ಬದುಕಿನ ನೈಜ ಸಾಧನೆ ಎಂದರು.
ನಗರಸಭೆ ಸದಸ್ಯ ಸತೀಶ್ ಬಾಬು, ಪ್ರಾಂಶುಪಾಲರ ಸಂಘದ ಪದಾಧಿಕಾರಿ ದೊಡ್ಡಬೋರಯ್ಯ, ಪ್ರದೀಪ್ ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ರಾಮಯ್ಯ, ಉಮಾದೇವಿ, ಇಂದ್ರಕುಮಾರ್, ಮಹೇಶ್, ಶ್ರೀನಿವಾಸ್, ದಿನೇಶ್ ಮಧುಕುಮಾರ್, ಸುರೇಶ್ ಇದ್ದರು.