Let social reform activities be carried out by the association
ಹುಳಿಯಾರು:ಹುಳಿಯಾರಿನ ಕನಕದಾಸ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಪುಸ್ತಕ ಹಾಗೂ ಕ್ರೀಡಾಸಾಮಗ್ರಿಗಳನ್ನು ವಿತರಿಸಲಾಯಿತು.
ಈ ವೇಳೆ ನಿವೃತ್ತ ಪ್ರಾಂಶುಪಾಲ ಜಿ.ಕೃಷ್ಣಯ್ಯ ಮಾತನಾಡಿ, ಒಂದು ಸಂಘಟನೆ ದಶಕಗಳ ಕಾಲ ನಿರಂತರವಾಗಿ ಬೆಳೆದುಬರುವುದು ಸುಲಭವಲ್ಲ. ಕನಕದಾಸ ಹಿರಿಯ ವಿದ್ಯಾರ್ಥಿಗಳ ಸಂಘವು ಹತ್ತಾರು ವರ್ಷಗಳಿಂದ ವಿದ್ಯಾರ್ಥಿಗಳ ಪ್ರಗತಿಯನ್ನೇ ಧ್ಯೇಯವಾಗಿಸಿಕೊಂಡು ಶ್ರಮಿಸುತ್ತಿದೆ. ಇಂದು ಉಚಿತ ನೋಟ್ಬುಕ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸುತ್ತಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ದೊಡ್ಡ ಆಸರೆಯಾಗಿದೆ ಎಂದರು.
ನಿವೃತ್ತ ಶಿಕ್ಷಕ ಜಗದೀಶ್ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಸಂಘ ಕೇವಲ ವೇದಿಕೆ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ದಶಕಗಳಿಂದ ನಿರಂತರವಾಗಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಣೆ, ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಯುವಜನರಲ್ಲಿ ಸನ್ಮಾರ್ಗ ಬಿತ್ತಲು ಸ್ವಾಮಿ ವಿವೇಕಾನಂದ ಜಯಂತಿ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ನಿವೃತ್ತ ಶಿಕ್ಷಕ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಲು ಕ್ವಿಜ್ ಸೇರಿದಂತೆ ಅನೇಕ ಸ್ಪರ್ಧೆ ನಡೆಸಿ, ಪ್ರತಿ ವರ್ಷ ಹಮ್ಮಿಕೊಳ್ಳುತ್ತಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ ಎಂದರು.
ಶಿವಣ್ಣ, ಚಂದ್ರಣ್ಣ, ವಾಸವಿ ಶಾಲೆಯ ಗಂಗಾಧರಯ್ಯ, ಬಸವೇಶ್ವರ ಶಾಲೆಯ ಮಂಜುನಾಥ್, ಹಿರಿಯ ವಿದ್ಯಾರ್ಥಿಗಳ ಸಂಘದ ಬಾಲಾಜಿ, ದುರ್ಗರಾಜು, ಕುಮಾರಸ್ವಾಮಿ, ಪುಷ್ಪಲತಾ, ಕಾಟಲಿಂಗಯ್ಯ, ಮಹೇಶಚಾರ್, ಎನ್.ಲೋಕೇಶ್, ಶಿವಣ್ಣ, ನಾಗರಾಜು ಇದ್ದರು.