ಆಳಂದನಲ್ಲಿ ಆಯೋಜಿಸಿದ್ದ "ಸಮಾಜ ಬದಲಾವಣೆಗಾಗಿ ವಿಜ್ಞಾನ' ತಾಲೂಕು ಮಟ್ಟದ ಸಮಾವೇಶಕ್ಕೆ ಸದಸ್ಯತ್ವ ನೀಡುವ ಮೂಲಕ ಶಿವಶರಣಪ್ಪ ಮೂಳೆಗಾಂವ್​ ಚಾಲನೆ ನೀಡಿದರು. ಪೂಜಾ ಲೋಹರ, ಪ್ರಭಾಕರ ಸಲಗರೆ, ಚಂದ್ರಶೇಖರ ಕಟ್ಟಿಮನಿ, ಪಂಡಿತರಾವ ಪಾಟೀಲ್​ ಇದ್ದರು. 
ರಾಜ್ಯ

ವಿಜ್ಞಾನ, ಸಂಶೋಧನೆಗೆ ಪ್ರಾಮುಖ್ಯತೆ ಸಿಗಲಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧ್ಯಕ್ಷ ಶಿವಶರಣಪ್ಪ ಮೂಳೆಗಾಂವ್​ ಆಶಯ
  • ಆಳಂದನಲ್ಲಿ ತಾಲೂಕು ಸಮಾವೇಶ
ಆಳಂದ: ಭಾರತದ ಸಂವಿಧಾನದ ಆದರ ಸ್ತಂಭಗಳಾದ ವೈಚಾರಿಕತೆ, ಸಾಮಾಜಿಕ ನ್ಯಾಯ ಮತ್ತು ವಿಜ್ಞಾನದ ಮೇಲಿನ ದಾಳಿ ಹೆಚ್ಚುತ್ತಿವೆ. ವೈಜ್ಞಾನಿಕ ಸತ್ಯಗಳನ್ನು ಅಪ್ರಮಾಣಿಕೃತವಾಗಿ ತಿರುಚಲಾಗುತ್ತಿದೆ. ಭ್ರಮೆ ಹಾಗೂ ಕಲ್ಪನೆಯನ್ನು ವಿಜ್ಞಾನ ಎಂದು ನಂಬಿಸಲಾಗುತ್ತಿದೆ ಎಂದು ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್​) ಅಧ್ಯಕ್ಷ ಶಿವಶರಣಪ್ಪ ಮೂಳೆಗಾಂವ್​ ತಿಳಿಸಿದರು.
ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಭಾರತ ನ ವಿಜ್ಞಾನ ಸಮಿತಿಯಿಂದ ಶನಿವಾರ ಆಯೋಜಿಸಿದ್ದ "ಸಮಾಜ ಬದಲಾವಣೆಗಾಗಿ ವಿಜ್ಞಾನ' ತಾಲೂಕು ಸಮಾವೇಶ ಉದ್ಘಾಟಿಸಿ ಮಾತನಾಡಿ, ಅಮಾನವೀಯ ಉಳಿಗಮಾನ್ಯ ಮೌಲ್ಯಗಳ ಅಸ್ತಿತ್ವದಿಂದ ಅಪಾಯದಲ್ಲಿರುವ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ನಾಗರಿಕ ಸ್ನೇಹಿ ಸಮಾಜವನ್ನಾಗಿ ರೂಪಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಶಿಕ್ಷಣ, ವಿಜ್ಞಾನ ಮತ್ತು ಸಂಶೋಧನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಿದೆ. ಸರ್ಕಾರಗಳು ಇವುಗಳನ್ನು ಆದ್ಯತೆಯಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ಮೂಢನಂಬಿಕೆ, ವಿವಿಧ ಅವೈಜ್ಞಾನಿಕ ಆಚರಣೆಗಳಿಂದ ಮುಕ್ತವಾದ ಸುಂದರ ಸಾಕ್ಷರ ನಾಡು. ಮಹಿಳಾ ಸಮಾನತೆ, ಸಾಕ್ಷರತೆ, ವೈಜ್ಞಾನಿಕತೆ, ವೈಚಾರಿಕತೆಗೆ ಯಾವುದೇ ತಾರತಮ್ಯಗಳಿಲ್ಲದ ಸಂವಿಧಾನದ ಆಶಯಗಳಿಗೆ ಅನುಗುಣವಾದ ನಿಜವಾದ ಜಾತ್ಯತಿತ ಸಮಾಜ ನಿಮಾರ್ಣವಾಗಬೇಕು. ಇದು ಸಾಕಾರಗೊಳ್ಳಲು ವಿಜ್ಞಾನದ ಬೆಳವಣಿಗೆ, ವೈಜ್ಞಾನಿಕ ಮನೋಧರ್ಮ, ವೈಚಾರಿಕ ಚಿಂತನೆ ಅತ್ಯಗತ್ಯವಾಗಿವೆ ಎಂದರು.
ಬಿಆರ್​ಪಿ ಚಂದ್ರಶೇಖರ ಕಟ್ಟಿಮನಿ ಅವರು ಶಿಕ್ಷಣದ ಹಕ್ಕು ಪ್ರಸ್ತುತ ಶೈಕ್ಷಣಿಕ ಸ್ಥಿತಿಗತಿ ಕುರಿತು ಮಾತನಾಡಿದರು. ಪ್ರಾಂಶುಪಾಲ ಪಂಡಿತರಾವ ಪಾಟೀಲ್​ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯೆ ಪೂಜಾ ಲೋಹಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಸತೀಶ ಸನ್ಮುಖ, ಬಿಜಿವಿಎಸ್​ ರಾಜ್ಯ ಸಮಿತಿ ಸದಸ್ಯ ಪ್ರಭಾಕರ ಸಲಗರೆ, ಮರಿಯಪ್ಪ ಬಡಿಗೇರ ಇತರರಿದ್ದರು. ಭವಾನಿ ಬಂಗರಗಿ ಸ್ವಾಗತಿಸಿ, ನಿರೂಪಣೆ ಮಾಡಿದರು.