ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ವಿರುದ್ಧ ತುಚ್ಛವಾಗಿ ಮಾತನಾಡಿರುವ ಶಾಸಕರಾದ ಪ್ರದೀಪ್ ಈಶ್ವರ್ ಮತ್ತು ಎಸ್.ಆರ್.ವಿಶ್ವನಾಥ್, ಕೂಡಲೇ ಕ್ಷಮೆ ಕೇಳುವಂತೆ ರಾಜ್ಯ ಒಕ್ಕಲಿಗರ ಸಂಘ ಆಗ್ರಹಿಸಿದೆ.
ಎಚ್‌ಡಿಕೆ ಬಗ್ಗೆ ಮಾತನಾಡಿದರೆ ನಾನು ದೊಡ್ಡವನಾಗುತ್ತೇನೆ ಎಂಬ ಭ್ರಮೆಯಲ್ಲಿ ಪ್ರದೀಪ್ ಈಶ್ವರ್ ಇದ್ದಾನೆ. ಕ್ಷಮೆ ಕೇಳದಿದ್ದರೆ ಅವರ ವಿರುದ್ಧ ಎಫ್ಐಆರ್ ಹಾಕಿಸಲು ಹೋರಾಟ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಪರಿಶ್ರಮ ಅಕಾಡೆಮಿಯ ಅಸಲಿಯತ್ತು ಬಯಲಿಗೆಳೆಯಲಾಗುವುದು.ನಮ್ಮ ಜನಾಂಗದ ರಾಜಕೀಯ ನಾಯಕರು ಬಗ್ಗೆ ಉದ್ಧಟತನ ಹೇಳಿಕೆ ಕೊಟ್ಟರೆ ಸಂಘದಿಂದ ಹೋರಾಟ ನಡೆಸುತ್ತೇವೆ.ಶಾಸಕರು ಗೌರವದಿಂದ ನಡೆದುಕೊಳ್ಳಬೇಕು. ಸಂಘರ್ಷಕ್ಕೆ ದಾರಿ ಮಾಡಿಕೊಳ್ಳಬಾರದು. ಕುಮಾರಣ್ಣನ ಧೂಳಿಗೆ ಆತ ಸಮನಲ್ಲ. ಆಕಸ್ಮಿಕ ಎಂಎಲ್‌ಎ ಆಗಿರುವ ಆತ ನಾಲಿಗೆಯನ್ನು ಹದ್ದು ಬಸ್ತಿನಲ್ಲಿಡಬೇಕು. ಅವನೊಬ್ಬ ಜೋಕರ್ ರಾಜಕಾರಣಿ ಎಂದು ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ನಿರ್ದೇಶಕರಾದ ನಲ್ಲಿಗೆರೆ ಬಾಲು, ಮಂಜೇಗೌಡ ಮತ್ತು ಹನುಮಂತರಾಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘಕ್ಕೆ ಸದಾನಂದಗೌಡ ಅವರು ತನ್ನದೆ ಕೊಡುಗೆ ಕೊಟ್ಟಿದ್ದಾರೆ. ಅವರು ಜನಾಂಗ ಮತ್ತು ಸಂಘದ ಆಸ್ತಿ. ಸದಾನಂದಗೌಡರನ್ನು ಯಾವ ಒಕ್ಕಲಿಗ ಎಂದು ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ. ಆದರೆ, ಅವರು ಮಂಗಳೂರು ಭಾಗದ ಗೌಡ್ರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ರಾಜಕೀಯವಾಗಿ ಏನು ಬೇಕಾದರೂ ಮಾತನಾಡಲಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಕ್ಷಮೆ ಕೇಳಿ ನಾವೆಲ್ಲರೂ ಒಂದೇ ಎಂದು ವಿಶ್ವನಾಥ್ ಹೇಳಬೇಕು. ಶ್ರೀಗಳ ಮಾರ್ಗದರ್ಶನದಲ್ಲಿ ಒಕ್ಕಲಿಗ ಸಮುದಾಯದಲ್ಲಿ ಬಿಟ್ಟು ಹೋಗಿರುವ ಉಪಪಂಗಡಗಳು ಸೇರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ನಲ್ಲಿಗೆರೆ ಬಾಲು ಹೇಳಿದರು.
ಸಂಘದಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ಕೋನಪ್ಪರೆಡ್ಡಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಲ್.ಶ್ರೀನಿವಾಸ್, ಈ ಬಗ್ಗೆ ಆಂತರಿಕ ಸಮಿತಿ ರಚಿಸಿ ಯಾರಿಂದ ಲೋಪವಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗುವುದು. ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಲಾಗುವುದು. ಅವರು ನಮ್ಮ ಸಂಘದ ನಿರ್ದೇಶಕರು. ಸಂಘದ ಲೋಪದ ಬಗ್ಗೆ ಕುಳಿತು ಚರ್ಚಿಸಬೇಕು ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್, ನಿರ್ದೇಶಕರಾದ ಮಂಜೇಗೌಡ, ರಮೇಶ್ ಮತ್ತಿತರರಿದ್ದರು.
ಸಮುದಾಯದ ಐಕ್ಯತೆ ಕಾಪಾಡಬೇಕು.ವಿಗಂಡಿಸುವ ಕೆಲಸಕ್ಕೆ ಕೈಹಾಕಬಾರದು. ಅವರು ಸೌಜನ್ಯ ರಾಜಕಾರಣಿ. ಮಾದರಿ ಸಿಎಂ ಆಗಿದ್ದಾರೆ. ವಿಶ್ವನಾಥ್ ಇಂತಹ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ. ಅವರು ಕೂಡಲೇ ಕ್ಷಮೆ ಕೇಳುವ ಮೂಲಕ ತಮ್ಮ ಹೇಳಿಕೆಯನ್ನು ವಾಪಸ್ ಪಡೆದರೆ ವಿಶ್ವನಾಥ್ ಅವರಿಗೆ ಇನ್ನಷ್ಟು ಗೌರವ ಹೆಚ್ಚಲಿದೆ ಎಂದು ಹನುಮಂತರಾಯಪ್ಪ ಹೇಳಿದರು.
ವಿಶ್ವನಾಥ್ ಅವರ ಹೇಳಿಕೆ ನಮಗೆ ನೋವು ತಂದಿದೆ. ಆ ಒಂದು ಹೇಳಿಕೆಯು ನಿದ್ದೆಯಲ್ಲಿದ್ದವರನ್ನ ಎಬ್ಬಿಸಿದಂತೆ ಆಗಿದೆ. ಡಿವಿಎಸ್ ಅವರ ರಕ್ತ ಪರೀಕ್ಷಿಸಿದರೆ ಒಕ್ಕಲಿಗರ ರಕ್ತ ಬರುತ್ತದೆ. ವಿಶ್ವನಾಥ್ ರಕ್ತ ಪರೀಕ್ಷಿಸಿದರೆ ಅವರಲ್ಲೂ ಬರುವುದು ಒಕ್ಕಲಿಗರ ರಕ್ತ. ಇಂಥ ಹೇಳಿಕೆ ನೀಡುವ ಮೊದಲು ಶಾಸಕರು ಯೋಚನೆ ಮಾಡಬೇಕು.
- ಡಾ.ಕೆ.ವಿ. ರೇಣುಕಾಪ್ರಸಾದ್, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ.