ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರೊೃೀತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ತಾಳಿಕೋಟೆ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ಆಶೀರ್ವಚನ ನೀಡಿದರು. ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು, ನಾಗಲಿಂಗಯ್ಯ ಮಠ ಇದ್ದರು. 
ರಾಜ್ಯ

ಮನುಷ್ಯ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಲಿ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಬಾಲ ಶಿವಯೋಗಿ ಸಿದ್ಧಲಿಂಗ ದೇವರು ಅಭಿಮತ
  • ಕುಂಟೋಜಿ ಗ್ರಾಮದಲ್ಲಿ ಧಾರ್ಮಿಕ ಪ್ರವಚನ ಪ್ರಾರಂಭ

ಮುದ್ದೇಬಿಹಾಳ: ದೇವರನ್ನು ಮೆಚ್ಚಿಸಲು ಕೇವಲ ಪೂಜೆ, ಉಪವಾಸ, ಬಂಗಾರ-ಬೆಳ್ಳಿ ಅರ್ಪಣೆ ಮಾಡಿದರೆ ಸಾಲದು. ಮನುಷ್ಯ ಜೀವನದಲ್ಲಿ ಸತ್ಯ, ಧರ್ಮ, ಸನ್ನಡತೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾದರೆ ದೇವರ ಕೃಪೆಗೆ ಪಾತ್ರನಾಗಲು ಸಾಧ್ಯ ಎಂದು ತಾಳಿಕೋಟೆಯ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ಧಲಿಂಗ ದೇವರು ಹೇಳಿದರು.

ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರಾವಣ ಮಾಸದ ಮಹತ್ವ ಹಾಗೂ ಮನುಷ್ಯನ ಬದುಕಿನಲ್ಲಿ ಧಾರ್ಮಿಕ ಆಚರಣೆಗಳ ನಿಜವಾದ ಉದ್ದೇಶದ ಕುರಿತು ಭಕ್ತರಿಗೆ ಮಾರ್ಮಿಕ ಸಂದೇಶ ನೀಡಿದರು.
ಊರಿನಲ್ಲಿ ಧರ್ಮ ಜಾಗೃತಿಯಾಗಲಿ, ಅನ್ಯಾಯ-ಅಕ್ರಮಗಳು ದೂರವಾಗಲಿ, ದುಷ್ಟತನ ನಾಶವಾಗಲಿ, ಜನರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಬೆಳೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಬೇಕು. ಇಂತಹ ವಿಶಾಲ ಮನೋಭಾವದ ಬೇಡಿಕೆಯೇ ಶ್ರಾವಣ ಮಾಸದ ಆರಾಧನೆಗೆ ನಿಜವಾದ ಸಾರ್ಥಕತೆಯನ್ನು ನೀಡುತ್ತದೆ. 
ಶ್ರಾವಣ ಮಾಸವು ಕೇವಲ ವ್ರತ-ಪೂಜೆಗಳಿಗೆ ಸೀಮಿತವಾಗದೆ, ನಮ್ಮ ಬದುಕನ್ನು ಪರಿಶುದ್ಧಗೊಳಿಸುವ, ಕೆಟ್ಟ ಚಿಂತನೆಗಳನ್ನು ಬಿಟ್ಟು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುವ ಹಾಗೂ ಸಮಾಜದ ಒಳಿತಿಗಾಗಿ ಸಂಕಲ್ಪ ಮಾಡುವ ಕಾಲವಾಗಬೇಕು ಎಂದು ಅವರು ತಿಳಿಸಿದರು.
ಕುಂಟೋಜಿ ಭಾವೈಕ್ಯ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ನಾಗಲಿಂಗಯ್ಯ ಮಠ, ಬಿ.ಎಸ್. ಹೂಗಾರ, ಶಿವಲಿಂಗಪ್ಪ ಗಸ್ತಿಗಾರ, ಸಂಗನಗೌಡ ಪಾಟೀಲ, ಸಂಗಮೇಶ ಹೂಗಾರ, ಗುರುಪಾದ ಹೆಬ್ಬಾಳ, ಅರವಿಂದ ಕೌಲಗಿ, ರಾಮಣ್ಣ ಹುಲಗಣ್ಣಿ, ಗುರುಲಿಂಗಪ್ಪ ಸುಲ್ಲಳ್ಳಿ, ಆನಂದ ಗಸ್ತಿಗಾರ, ಮಲ್ಲಿಕಾರ್ಜುನ ನಾಟೀಕಾರ, ರಾಮಣ್ಣ ಹುಲಗಣ್ಣಿ, ಬಸಲಿಂಗಪ್ಪಗೌಡ ಬಿರಾದಾರ, ಸಂಗಮೆಶ ವನರೊಟ್ಟಿ ಇತರರಿದ್ದರು.