Let Kannada be the language of food.
ಗುಬ್ಬಿ: ರಾಜ್ಯ ಸರ್ಕಾರವು ಕನ್ನಡ ಮಾಧ್ಯಮಕ್ಕೆ ಉದ್ಯೋಗ ವೀಸಲಾತಿ ನೀಡುವ ದಿಟ್ಟ ನಿಲುವು ತಾಳಬೇಕಿದೆ. ಆ ಮೂಲಕ ಕನ್ನಡ ಅನ್ನದ ಭಾಷೆ ಆಗಲಿ ಎಂಬುದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಬಿ.ನಂಜುಂಡಸ್ವಾಮಿ ಒತ್ತಾಸೆಯಾಗಿದೆ.
ಇತ್ತೀಚೆನ ದಿನಗಳಲ್ಲಿ ಗ್ರಾಮಾಂತರ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪಿದ್ದು ಭಾಷೆಗೆ ಗಂಡಾಂತರ ಎದುರಾಗಿದೆ. ಖಾಸಗಿ ಜತೆಗೆ ಆಂಗ್ಲ ಮಾಧ್ಯಮಕ್ಕೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಿದೆ. ಕನ್ನಡ ನಮ್ಮ ಅನ್ನದ ಭಾಷೆಯಾಗಬೇಕು. ಆ ಮೂಲಕ ನಮ್ಮ ಎರಡೂವರೆ ಸಾವಿರ ಇತಿಹಾಸವುಳ್ಳ ಭಾಷೆ ಉಳಿಸಿ, ಬೆಳಸಬೇಕಿದೆ. ಯುವ ಜನರಲ್ಲಿ ಪುಸ್ತಕ ಪ್ರೀತಿ ಕಡಿಮೆಯಾಗಿದೆ. ಬೆರಳೆಣಿಕೆ ಮಂದಿ ಸಾಹಿತ್ಯಾಸಕ್ತಿ ಬೆಳೆಸಿಕೊಂಡು ಲೇಖನಗಳು ಬರೆದರೆ ಅವರಿಗೆ ಸರ್ಕಾರ ಯಾವುದೇ ಪ್ರೊತ್ಸಾಹ ನೀಡುತ್ತಿಲ್ಲ ಎಂದು ಸಾತ್ವಿಕ ಸಿಟ್ಟು ಹೊರಹಾಕಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ 6ನೇ ಕನ್ನಡ ಸಾಹಿತ್ಯ ಸಮ್ಮೇಳನಧ್ಯಾಕ್ಷ ನುಡಿಗಳನ್ನಾಡಿದ ನಂಜುಂಡಸ್ವಾಮಿ ಅವರು, ಗ್ರಂಥಾಲಗಳು ಸಹ ಓದುಗರ ಕೊರತೆ ಎದುರಿಸುತ್ತಿವೆ. ಗ್ರಂಥಾಲಯ ಸೆಸ್ ವಸೂಲಿ ಮಾಡಲಾಗುತ್ತಿದೆ. ಆದರೆ, ಗ್ರಂಥಾಲಯಕ್ಕೆ ಪುಸ್ತಕಗಳು ಖರೀದಿಸುತ್ತಿಲ್ಲ. ಅಂತೂ ಇಂತೂ ಖರೀದಿ ನಡೆದರೆ ಅದರ ಹಣಬರಲು 3&4 ವರ್ಷ ಬೇಕಾಗುತ್ತದೆ. ಪ್ರಕಾಶಕರ ಸ್ಥಿತಿ ಶೋಚನೀಯ. ಸರ್ಕಾರ ಪುಸ್ತಕೋದ್ಯಮ ರಕ್ಷಿಸಬೇಕಿದೆ. ಈ ಕಾಯಕವು ಎಲ್ಲ ಕನ್ನಡಿಗರ ಕರ್ತವ್ಯವಾಗಲಿ ಎಂದು ಆಗ್ರಹಪೂರ್ವಕ ಮಾತುಗಳನ್ನಾಡಿದರು.
ಸಮಾರಂಭ ಉದ್ಘಾಟಿಸಿದ ಹರಿಕಥ ವಿದ್ವಾನ್ ಡಾ.ಲಕ್ಷ$್ಮಣದಾಸ್ ಮಾತನಾಡಿ, ಹದಿನೆಂಟು ಕೋಮಿನ ಗುಬ್ಬಿಯಪ್ಪನ ಇತಿಹಾಸಕ್ಕೆ ಸಾಕ್ಷಿ, ಆಧಾರ ಸಹಿತ ಕೃತಿ ರಚಿಸಿದ ನಂಜುಂಡಸ್ವಾಮಿ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ವಿಶೇಷ ಅರ್ಥ ತಂದಿದೆ. ಗುಬ್ಬಿಯ ಮಹನೀಯರಲ್ಲಿ ನಿಟ್ಟೂರು ಶ್ರೀನಿವಾಸರಾವ್, ಹೊಸಕೆರೆ ಚಿದಂಬರಯ್ಯ, ಹಾಗಲವಾಡಿ ಜುಂಜಪ್ಪ, ನಾಟಕರತ್ನ ಗುಬ್ಬಿ ವೀರಣ್ಣ, ಚಿ.ಉದಯಂಕರ, ಗಂಗಾಧರಯ್ಯ ಹೀಗೆ ಅನೇಕರನ್ನು ಸ್ಮರಿಸುವ ಕರ್ತವ್ಯ ಎಲ್ಲರ ಮೇಲಿದೆ ಎಂದರು.
ಕನ್ನಡ ಧ್ವಜಹಸ್ತಾಂತರ ಮಾಡಿದ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಚಿಕ್ಕಣ್ಣ ಯಣ್ಣೆಕಟ್ಟೆ ಮಾತನಾಡಿ, ನಮ್ಮ ನೆಲಮೂಲ ಪರಂಪರೆ ಬಿಂಬಿಸುವ ಸಾಹಿತ್ಯ ಜನಪದ ಸೊಗಡಿನಲ್ಲಿದೆ. ಜುಂಜಪ್ಪನ ಕಾವ್ಯ ಎಂದಿಗೂ ಕಾಡುಗೊಲ್ಲ ಪರಂಪರೆ ತೋರುತ್ತದೆ. ಜತೆಗೆ ಶಕ್ತಿ ದೇವತೆಗಳ ಆರಾಧನೆ ನಮ್ಮಲ್ಲಿದ್ದು ಮಣ್ಣಮ್ಮ ಗ್ರಾಮದೇವತೆ, ಆಲದ ಕೊಂಬೆಯಮ್ಮ, ಕೊಲ್ಲಾಪುರದಮ್ಮ, ದಂಡಿನ ಮಾರಮ್ಮ ಹೀಗೆ ಅನೇಕ ಇತಿಹಾಸ ನಮಲ್ಲಿ ಪರಿಶಿಷ್ಟ ವಲಯದಿಂದ ಉಳಿದುಬದಿದೆ. ಪ್ರಸಿದ್ಧ ವಿಮರ್ಶಕ ಕಲ್ಲೂರು ನಾಗರಾಜಪ್ಪ, ಎಸ್.ನಾಗಪ್ಪ ಮೊದಲದಾವರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ತಹಸೀಲ್ದಾರ್ ಬಿ. ಆರತಿ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಬಿಇಒ ನಟರಾಜ್, ತಾಪಂ ಇಒ ರಂಗನಾಥ, ಸಾಹಿತಿ ಎಚ್.ಕೆ.ನರಸಿಂಹಮೂರ್ತಿ, ಕಸಾಪ ತಾಲೂಕು ಅಧ್ಯಕ್ಷ ಯತೀಶ್, ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ, ಪಪಂ ಮಾಜಿ ಸದಸ್ಯರಾದ ಮಹಮ್ಮದ್ ಸಾದಿಕ್, ಕೇರಳದ ಕನ್ನಡ ಪ್ರಾಧ್ಯಾಪಕ ಡಾ.ಗೋವಿಂದರಾಜು ಎಂ ಕಲ್ಲೂರು, ಕಳ್ಳಿ ಪಾಳ್ಯ ಲೋಕೇಶ್, ಕಾಡಶೆಟ್ಟಿಹಳ್ಳಿ ಸತೀಶ್, ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ, ಗುಬ್ಬಚ್ಚಿಸತೀಶ್, ರಾಜೇಶ್ ಗುಬ್ಬಿ, ಚೇಳೂರು ಶಿವನಂಜಪ್ಪ ಮತ್ತಿತರರು ಇದ್ದರು.