ಕೊಳ್ಳೇಗಾಲದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿದರು. ಶೈಲೇಂದ್ರ, ಜಕಾವುಲ್ಲಾ, ರಾಜೇಶ್ ಮಹಾಜನ್, ಸಾಲೋ ಮಾನ್, ಮೋಳೆ ರಾಜು, ಪೆರಿಯಾನಾಯಗಂ, ಕುಣಗಳ್ಳಿ ಮಹೇಶ್ ಇದ್ದರು.
- ನಕಲಿ ಎನ್‌ಕೌಂಟರ್ ಖಂಡಿಸಿ
- ಗುಂಡಿಗೆ ಬಲಿಯಾದ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ
ಕೊಳ್ಳೇಗಾಲ:
ನಕಲಿ ಎನ್‌ಕೌಂಟರ್ ಖಂಡಿಸಿ ಹಾಗೂ ಗುಂಡಿಗೆ ಬಲಿಯಾದ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸಮಾವೇಶಗೊಂಡ ಜಯ ಕರ್ನಾಟಕ ಜನಪರ ವೇದಿಕೆ, ರೈತ ಸಂಘ, ಪ್ರಜಾ ವಿಮೋಚನಾ ಸಮಿತಿ ಸಾಮಾಜಿಕ ನ್ಯಾಯ ಸಂಘ ಹಾಗೂ ಎಸ್‌ಡಿಪಿಐ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯ ನೀಡಬೇಕೆಂದು ಆಗ್ರಹಿಸಿದರು.
ರೈತ ಸಂಘದ ಅಧ್ಯಕ್ಷ ಶೈಲೇಂದ್ರ ಮಾತನಾಡಿ, ಆ.15ರಂದು ಅರಣ್ಯ ಇಲಾಖೆಗುಂಡು ಹಾರಿಸಿ ಮೂರು ಜನರನ್ನು ಒಲಿ ತೆಗೆದುಕೊಳ್ಳುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿವೆ. ಇದು ಅಕ್ಷ್ಯಮ್ಯ. ಅರಣ್ಯ ಇಲಾಖೆ ಅಧಿಕಾರಿಗಳ ಶೂಟೌಟ್‌ನಿಂದ ಮೃತರಾದವರನ್ನು ತಮ್ಮ ಜೀಪಿನ ಮೂಲಕ ಆಸ್ಪತ್ರೆಗೆ ಸಾಗಿಸಿ ಸಾಕ್ಷಿ ನಾಶ ಮಾಡಲಾಗಿದೆ. ಆದ್ದರಿಂದ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದರು.
ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಗೆ ಆದೇಶಿಸಬೇಕು. ನೊಂದ ಕುಟುಂಬಗಳಿಗೆ ಕನಿಷ್ಠ ತಲಾ ಎರಡು ಕೋಟಿ ರೂ. ಪರಿಹಾರ ನೀಡಬೇಕು. ಹತ್ಯೆಯಾಗಿರುವ ಪ್ರತಿ ಕುಟುಂಬಕ್ಕೆ 5 ಎಕರೆ ಕೃಷಿ ಭೂಮಿಯೊಂದಿಗೆ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು. ಇದರೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಹನೂರು ತಾಲೂಕಿನಲ್ಲಿ ಎಲ್ಲ ಜಾತಿ, ಧರ್ಮ ಭಾಷೆಯ ಜನರು ಒಂದೇ ಕುಟುಂಬದಂತೆ ಬುದುಕುತ್ತಿದ್ದು, ಪಕ್ಕದ ರಾಜ್ಯ ತಮಿಳುನಾಡು ಮುಖ್ಯ ಮಂತ್ರಿಗಳು ತಮಿಳು ಜನರನ್ನು ಕೊಲ್ಲಲಾಗಿದೆ ಎಂದು ಹೇಳುತ್ತಿದ್ದಾರೆ. ಇಂತಹ ಹೇಳಿಕೆಗಳಿಂದ ಭಾಷೆ-ಭಾಷೆಗಳ ಮಧ್ಯೆ ವೈಷಮ್ಯ ಉಂಟಾಗಬಹುದು. ಆದ್ದರಿಂದ ಇಂತಹ ಹೇಳಿಕೆಗಳನ್ನು ಅಲ್ಲಿನ ಮುಖ್ಯಮಂತ್ರಿಗಳು ವಾಪಸ್ ಪಡೆಯಬೇಕು ಎಂದರು.
ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಜಕಾವುಲ್ಲಾ ಮಾತನಾಡಿ, ಅರಣ್ಯ ಇಲಾಖೆಯ ಗುಂಡಿನ ದಾಳಿಯಿಂದ ಬಲಿಯಾದವರ ಕುಟುಂಬಗಳಿಗೆ ಅನ್ಯಾವಾಗಿರುವ ವಿಚಾರ ರಾಜ್ಯಕ್ಕೆ ತಿಳಿದಿದೆ. ಸರ್ಕಾರ ಕೂಡಲೇ ನೊಂದವರ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿದರು.
ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಜಕಾವುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಮಹಾಜನ್, ರೈತ ಸಂಘದ ರಾಜ್ಯಾಧ್ಯಕ್ಷ ಶೈಲೇಂದ್ರ, ರಾಜ್ಯ ಕಾರ್ಯದರ್ಶಿ ಸಾಲೋ ಮಾನ್, ತಾಲೂಕು ಅಧ್ಯಕ್ಷ ಮೋಳೆ ರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಪೆರಿಯಾನಾಯಗಂ, ಪ್ರಜಾ ವಿಮೋಚನಾ ಸಮಿತಿ ಸಾಮಾಜಿಕ ನ್ಯಾಯ ಸಂಘ ಜಿಲ್ಲಾಧ್ಯಕ್ಷ ಕುಣಗಳ್ಳಿ ಮಹೇಶ್, ಎಸ್‌ಡಿಪಿಐ ಅಧ್ಯಕ್ಷ ಇಮ್ರಾನ್ ಟಿಪ್ಪು ಇದ್ದರು.