ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಸಾವಿತ್ರಿಬಾಯಿ ಪುಲೆ ಜಯಂತಿಯನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್ ಉದ್ಘಾಟಿಸಿದರು. Employee
- ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್ ಹೇಳಿಕೆ
ಶ್ರೀನಿವಾಸಪುರ: ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ Employee ಯೋಜನೆ ನಮ್ಮ ಕೋಲಾರ ಜಿಲ್ಲೆಯಲ್ಲಿ 30 ಹಾಸಿಗೆಗಳಿರುವ ಪ್ರತಿ ಆಸ್ಪತ್ರೆಯಲ್ಲೂ ನೌಕರರಿಗೆ ಲಭ್ಯವಾಗಲು ಶ್ರಮಿಸುತ್ತೇನೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ತಾಲೂಕು ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕಾರ್ಯಾಗಾರ, 2026ನೆ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ, ಸಾವಿತ್ರಿಬಾಯಿ ಜಯಂತಿಯಲ್ಲಿ ಮಾತನಾಡಿ, ನಮ್ಮ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನಿರಂತರ ಹೋರಾಟದ ಲವಾಗಿ ಆರೋಗ್ಯ ಸಂಜೀವಿನಿ ಭಾಗ್ಯ ಜಾರಿಯಾಗಿದ್ದು, ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ತಾಲೂಕು ಮತ್ತು ನಮ್ಮ ಜಿಲ್ಲೆಯ ಪ್ರತಿಷ್ಠಿತ ಎಲ್ಲ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ನೌಕರರರಿಗೆ ಚಿಕಿತ್ಸೆ ದೊರಕಲು ಶ್ರಮಿಸುತ್ತೇವೆ ಎಂದರು.
ಕಾರ್ಯನಿರ್ವಹಣಾಧಿಕಾರಿ ಸರ್ವೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ. ತರಬೇತಿಗಳು, ಸಭೆಗಳು, ಹೊಸ ಹೊಸ ಯೋಜನೆಗಳು ಹೆಚ್ಚಾಗುತ್ತಿವೆ. ಸಿಬ್ಬಂದಿ ಕೊರತೆ ಇದೆ. ಇವೆಲ್ಲವನ್ನೂ ಮೀರಿ ಆತ್ಮಸ್ಥೆ$ರ್ಯದಿಂದ ನಾವು ಕೆಲಸ ಮಾಡಬೇಕು. ನಮ್ಮ ಕೆಲಸದ ಒತ್ತಡ, ನಮ್ಮ ಸಹಪಾಠಿ ನೌಕರರು ಜವಾಬ್ದಾರಿ ವಹಿಸಿಕೊಳ್ಳಬೇಕು. ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು ಎಂದರು.
ನೌಕರರ ಸಂಘದ ಖಜಾಂಚಿ ಮುಲ್ಲಳ್ಳಿ ವೆಂಕಟೇಶ್ ಅವರು ಸಭೆಯ ವಾರ್ಷಿಕ ಖರ್ಚು ವೆಚ್ಚಗಳನ್ನು ಮಂಡಿಸಿದರು.
ತಾಲೂಕಿನ ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಶ್ರಮಿಸಿದ ಸುಮಾರು 10 ಶಿಕ್ಷಕಿಯರಿಗೆ ಶಿಕ್ಷಕರಿಗೆ ಸಾವಿತ್ರಿ ಬಾಯಿಪುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನೌಕರರ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಎಂ.ಬೈರೇಗೌಡ, ಚಿಂತಾಮಣಿ ತಾಲೂಕು ಅಧ್ಯಕ್ಷ ಅಶೋಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರೆಡ್ಡೆಪ್ಪ, ಜಿಲ್ಲಾ ಖಜಾಂಚಿ ಎಂ. ಶಿವಣ್ಣ, ತಾಲೂಕು ಖಜಾಂಚಿವೇಣುಗೋಪಾಲ, ಉಪ ಖಜಾನಾಧಿಕಾರಿ ವೀಣಾ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮುರಳೀಬಾಬು, ಎಸ್ಸಿ&ಎಸ್ಟಿ ಸಮನ್ವಯ ನೌಕರರ ಸಂಘದ ಅಧ್ಯಕ್ಷ ಮುನಿವೆಂಕಟಪ್ಪ, ಸಿಡಿಪಿಒ ಬೈರಾರೆಡ್ಡಿ, ಇಂಜಜಿನಿಯರ್ಗಳಾದ ಸುನೀತಾ, ಮಂಜುನಾಥ್, ಸುರೇಶ್ ಇತರರು ಇದ್ದರು.
ಜಿಲ್ಲಾ ಅಧ್ಯಕ್ಷರಿಗೆ ದೂರು: ಸಭೆಯಲ್ಲಿ ಪಟ್ಟಣದ ವಾಸಿ 2013ರಲ್ಲಿ ಭವನದಲ್ಲಿ ಒಂದು ಕೊಠಡಿಯನ್ನು ನನಗೆ ಲೀಸ್ ಬರೆದು ಕೊಟ್ಟಿದ್ದು, ನನ್ನಿಂದ 4.25 ಲಕ್ಷ ರೂ. ನಗದು ಅಂದಿನ ಅಧ್ಯಕ್ಷ ಬಂಗವಾದಿ ಎಂ. ನಾಗರಾಜ್ ಪಡೆದಿರುತ್ತಾರೆ. ನಮಗೆ ಹಣವನ್ನಾದರೂ ವಾಪಸ್ ಕೊಡಿಸಿ, ಇಲ್ಲವಾದಲ್ಲಿ ಕೊಠಡಿಯಲ್ಲಿ ಹೋಟೆಲ್ ನಡೆಸಲು ಅವಕಾಶ ಮಾಡಿಕೊಡಿ ಎಂದು ತಾಲೂಕು ಮತ್ತು ಜಿಲ್ಲಾ ಅಧ್ಯಕ್ಷರಿಗೆ ರವಿ ಕುಮಾರ್ ಕುಟುಂಬದವರು ಮನವಿ ಮಾಡಿದರು.