ಗುಂಡ್ಲುಪೇಟೆ ತಾಲೂಕಿನ ದೊಡ್ಡತುಪ್ಪೂರು ಸಮೀಪ ನಿರ್ಮಾಣವಾದ ರೇಡಿಯಂಟ್ ಶಾಲೆಯಲ್ಲಿ ಸಿದ್ಧಗಂಗಾ ಶ್ರೀಗಳ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮವನ್ನು ಡಿ.ವಿ.ಸದಾನಂದಗೌಡ ಉದ್ಘಾಟಿಸಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಬಿ.ಎಲ್.ಸಂತೋಷ್, ಗಣೇಶ್ ಪ್ರಸಾದ್, ನಿರಂಜನಕುಮಾರ್, ನಿಜಗುಣರಾಜು, ಬೆಳ್ಳಿಪ್ರಕಾಶ್, ಎನ್.ಮಹೇಶ್, ಶ್ರೀವತ್ಸ ಇತರರು ಇದ್ದರು.
ಗುಂಡ್ಲುಪೇಟೆ: ಹಿಂದೆ ಸರ್ಕಾರಿ ಹಾಗೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದವರೇ ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಅತ್ಯುನ್ನತ ಪ್ರಶಸ್ತಿಗಳನ್ನು ಸ್ವೀಕರಿಸಿದರು ಎಂದು ಸುತ್ತೂರು ಮಠಾಧ್ಯಕ್ಷ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ದೊಡ್ಡತುಪ್ಪೂರು ಸಮೀಪ ಭಾನುವಾರ ರೇಡಿಯಂಟ್ ಶಾಲೆಯಲ್ಲಿ ಸಿದ್ಧಗಂಗಾ ಶ್ರೀಗಳ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಬಳಿಕ ಮಾತನಾಡಿದರು.
ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ಕೊಡಿಸಲು ಮುಂದಾಗುವುದರಿಂದ ಖಾಸಗಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಾಲ್ಯದಲ್ಲಿಯೇ ಶಿಕ್ಷಣದೊಂದಿಗೆ ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸಬೇಕಾಗಿದೆ. ಸಮಾಜದಲ್ಲಿ ಇದಕ್ಕೆ ಪೂರಕವಾದ ಶಾಲೆಗಳ ಅಗತ್ಯವಿದೆ. ಹಿಂದೆ ಶಿಕ್ಷಕರು ತಮ್ಮ ವೃತ್ತಿಯನ್ನು ಅತ್ಯಂತ ಮೌಲ್ಯಯುತವಾಗಿ ಪರಿಗಣಿಸಿ ಮಕ್ಕಳಿಗೆ ಶಿಕ್ಷಣ ನೀಡಿದ್ದರಿಂದಲೇ ಹಿಂದೆ ಸರ್ಕಾರಿ ಹಾಗೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದವರು ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಅತ್ಯುನ್ನತ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಈ ಬಗ್ಗೆ ಕನ್ನಡಿಗರು ಅಭಿಮಾನಪಡಬೇಕಾಗಿದೆ ಎಂದು ಹೇಳಿದರು.
ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಶಿಕ್ಷಣ ಹಾಗೂ ಜ್ಞಾನ ಇದ್ದವರಿಗೆ ಮಾತ್ರ ಸಮಾಜದಲ್ಲಿ ಬೆಲೆ ಇರುತ್ತದೆ. ಸಿದ್ಧಗಂಗೆ ಹಾಗೂ ಸುತ್ತೂರು ಮಠದ ಹಿರಿಯ ಶ್ರೀಗಳು ಅನ್ನದಾಸೋಹದೊಂದಿಗೆ ಮಕ್ಕಳಿಗೆ ಉಚಿತ ಶಿಕ್ಷಣ ದಾಸೋಹ ಆರಂಭಿಸಿ ಲಕ್ಷಾಂತರ ಜನರಿಗೆ ದಾರಿದೀಪವಾದರು. ಶಾಲೆಗಳು ಹೆಚ್ಚಾದಷ್ಟು ಜೈಲುಗಳಲ್ಲಿ ಅಪರಾಧಿಗಳು ಕಡಿಮೆಯಾಗುತ್ತಾರೆ. ಚಾಮರಾಜನಗರದ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ಶಾಲೆಗಳನ್ನು ತೆರೆಯುವ ಮೂಲಕ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಕಳಚಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ಮಾದರಿಯಲ್ಲಿ ಶಿಕ್ಷಣ ನೀಡಿದರೆ ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಅಲ್ಲಿಗೆ ದಾಖಲಿಸುತ್ತಾರೆ. ಯಾವುದೇ ಶಿಕ್ಷಣ ಸಂಸ್ಥೆ ಉತ್ತುಂಗಕ್ಕೇರಲು ಅಲ್ಲಿನ ಶಿಕ್ಷಕರ ಪಾತ್ರ ದೊಡ್ಡದಾಗಿದೆ. ಸಂಕಲ್ಪ ಶಕ್ತಿಯಿದ್ದಲ್ಲಿ ಮಾತ್ರ ವಿದ್ಯಾಸಂಸ್ಥೆ ನಡೆಸಲು ಸಾಧ್ಯ ಎಂದರು.
ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮಾತನಾಡಿ, ಅನ್ನ ಅಕ್ಷರ ಮತ್ತು ಆರೋಗ್ಯದ ವಿಚಾರದಲ್ಲಿ ಗ್ರಾಮೀಣ ಭಾಗದ ಜನರು ಎಲ್ಲ ರೀತಿಯಲ್ಲಿಯೂ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಸುತ್ತೂರು ಮಠ ಹಾಗೂ ಸಿದ್ಧಗಂಗಾ ಮಠಗಳು ಗ್ರಾಮಾಂತರ ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳನ್ನು ತೆರೆದು ಶಿಕ್ಷಣ, ಅನ್ನ, ಜ್ಞಾನ ದಾಸೋಹ ನೀಡುತ್ತಿವೆ ಎಂದರು.
ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಲು ಹೊರಜಿಲ್ಲೆಗಳಿಗೆ ತೆರಳುವುದನ್ನು ತಪ್ಪಿಸಲು ಸಿದ್ಧಗಂಗಾ ಶ್ರೀಗಳ ಮಾರ್ಗದಲ್ಲಿ ಶಾಲೆ ಆರಂಭಿಸಲಾಗುತ್ತಿದ್ದು, ಈ ಭಾಗದ ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸ್ಥೆ ಅಧ್ಯಕ್ಷ ನಿಜಗುಣರಾಜು ಹೇಳಿದರು.
ಕನಕಗಿರಿ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ್, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿದರು. ಕೆ.ಆರ್ ಕ್ಷೇತ್ರದ ಶಾಸಕ ಶ್ರೀವತ್ಸ, ಬೇಲೂರು ಶಾಸಕ ಎಚ್.ಕೆ.ಸುರೇಶ್, ಕಡೂರು ಮಾಜಿ ಶಾಸಕ ಬೆಳ್ಳಿಪ್ರಕಾಶ್, ಮಾಜಿ ಸಚಿವ ಎನ್. ಮಹೇಶ್, ಟ್ರಸ್ಟಿ ಮಂಜುಳಾ ರಾಜ್, ಕಾರ್ಯದರ್ಶಿ ಶ್ವೇತಾ, ಜಿಪಂ ಮಾಜಿ ಸದಸ್ಯ ಸಿ.ಎನ್.ಬಾಲರಾಜು, ಬಿಜೆಪಿ ಯುವ ಮೊರ್ಚಾ ಜಿಲ್ಲಾಧ್ಯಕ್ಷ ಸಿ.ಬಿ.ಸೂರ್ಯಕುಮಾರ್ ಇತರರು ಇದ್ದರು.