ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚೋಕಿರ.ಬಿ.ಪೊನ್ನಪ್ಪ, ಕೇಟೋಳಿರ ರಾಜ ಗಣಪತಿ, ನೂರಂಬಡ ಎಸ್.ಉದಯ ಶಂಕರ್ ಅವರನ್ನು ಸನ್ಮಾನಿಸಲಾಯಿತು.
- ಕರ್ನಾಟಕ ಪಬ್ಲಿಕ್ ಶಾಲೆ
- ರೋಟರಿ ಮಿಸ್ಟಿ ಹಿಲ್ಸ್
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿಶ್ವ ಹಿರಿಯರ ನಾಗರಿಕರ ದಿನವನ್ನು ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಚೋಕಿರ.ಬಿ.ಪೊನ್ನಪ್ಪ, ಸಮಾಜ ಸೇವಕರಾದ ಕೇಟೋಳಿರ ರಾಜ ಗಣಪತಿ, ನೂರಂಬಡ ಎಸ್.ಉದಯ ಶಂಕರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಮೂವರು ಗಣ್ಯರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು. ತಮ್ಮ ಬಾಳಿಗೆ ಬೆಳಕಾದ ಗುರು-ಹಿರಿಯರು, ಪಾಲಕರ ಮಾರ್ಗದರ್ಶನವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಮಕ್ಕಳು ದುಶ್ಚಟಗಳಿಗೆ ದಾಸರಾಗದೆ, ಶಿಕ್ಷಿತರಾಗಿ ಸಮಾಜದ ಸತ್ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ವಿದ್ಯಾರ್ಥಿಗಳಾದ ಸುಮಿತಾ ಶಾಲ್, ಫಾತಿಮತ್ ಅಫ್ರೀನಾ, ಆಯಿಷಾ ಹಿರಿಯ ನಾಗರಿಕರ ದಿನಾಚರಣೆಯ ಮಹತ್ವ, ಹಿರಿಯರ ಅಗತ್ಯತೆ ಕುರಿತು ಮಾತನಾಡಿದರು. ಇದೊಂದು ಅಭೂತಪೂರ್ವ ಕಾರ್ಯಕ್ರಮ. ವಿದ್ಯಾರ್ಥಿಗಳಾದ ನಮಗೆ ಇಂತಹ ಕಾರ್ಯಕ್ರಮ ಸದುಪಯೋಗವಾಗುತ್ತದೆ. ಯಾವುದೇ ಕಾರಣಕ್ಕೂ ಹಿರಿಯರನ್ನು ಅಸಡ್ಡೆ ಮಾಡಬಾರದು ಎಂದು ನುಡಿದರು.
ರೋಟರಿ ಮಿಸ್ಟಿ ಹಿಲ್ಸ್ನ ಕಾರ್ಯ ವ್ಯಾಪ್ತಿ ಮತ್ತು ಚಟುವಟಿಕೆಗಳ ಬಗ್ಗೆ ಎಂ.ಧನಂಜಯ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕೆಪಿಎಸ್‌ನ ಉಪ ಪ್ರಾಂಶುಪಾಲ ಎಂ.ಎಸ್.ಶಿವಣ್ಣ, ರೋಟರಿ ಮಿಸ್ಟಿ ಹಿಲ್ಸ್ ಆಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಶಾಲೆಯ ಎಸ್‌ಡಿಎಂಸಿ ಸದಸ್ಯರಾದ ಉಸ್ಮಾನ್, ಇಂಟರ‌್ಯಾಕ್ಟ್ ಕ್ಲಬ್‌ನ ಸಂಯೋಜಕ ಶಿಕ್ಷಕಿ ಕೆ.ಬಿ.ಉಷಾರಾಣಿ, ರೋಟರಿ ಮಿಸ್ಟಿ ಹಿಲ್ಸ್‌ನ ಸದಸ್ಯರಾದ ಅಜಿತ್ ನಾಣಯ್ಯ, ಕ್ಯಾರಿ ಕಾರ್ಯಪ್ಪ, ನಿಶಾಂತ್ ಬೆಳ್ಳಿಯಪ್ಪ, ಶ್ರೀಹರಿರಾವ್, ಸುಮನಾರಾವ್, ಸುಮೇಧ ಇತರರಿದ್ದರು. ಇದೇ ವೇಳೆ ನಶಾಮುಕ್ತ ಭಾರತ ಕುರಿತು ಪ್ರತಿಜ್ಞೆ ಸ್ವೀಕರಿಸಲಾಯಿತು.