Let activists actively participate in SIR
ಬಂಗಾರಪೇಟೆ: ಪ್ರಜಾಪ್ರಭುತ್ವದ ಬಲವರ್ಧನೆಗೆ ಮುಕ್ತ, ನಿಷ್ಪಕ್ಷಪಾತ ಚುನಾವಣೆ ಅಗತ್ಯವಾಗಿದ್ದು, ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಡೆಯಲಿರುವ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಂಸದ ಮಲ್ಲೇಶ್ ಬಾಬು ಕರೆ ನೀಡಿದರು.
ನಗರದ ಖಾಸಗಿ ಸಭಾಂಗಣದಲ್ಲಿ ಗುರುವಾರ ಜೆಡಿಎಸ್ ತಾಲೂಕು ಘಟಕ ಆಯೋಜಿಸಿದ್ದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ದೇಶದ ಚುನಾವಣಾ ವ್ಯವಸ್ಥೆ ಜಗತ್ತಿಗೆ ಮಾದರಿಯಾಗಿದೆ. ಸಂಸತ್ತು, ರಾಜ್ಯ ವಿಧಾನಮಂಡಲಗಳ ಚುನಾವಣೆಗಳನ್ನು ಭಾರತ ಚುನಾವಣಾ ಆಯೋಗ ಪಾರದರ್ಶಕ, ನಿಷ್ಪಕ್ಷಪಾತವಾಗಿ ನಡೆಸಿಕೊಂಡು ಬರುತ್ತಿದೆ. ಈ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯ ನಿಖರತೆ ಅತ್ಯಂತ ಮಹತ್ವದ್ದಾಗಿದ್ದು, ಚುನಾವಣಾ ಆಯೋಗವು ವಿವಿಧ ಅವಧಿಗಳಲ್ಲಿ ದೇಶವ್ಯಾಪಿ ಎಸ್ಐಆರ್ ನಡೆಸಿದೆ ಎಂದರು.
ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು ನಮ್ಮ ಕರ್ತವ್ಯ. ಬೂತ್ ಮಟ್ಟದಲ್ಲಿ ಗೆದ್ದರೆ ಚುನಾವಣೆ ಗೆಲ್ಲಬಹುದು. ಬೂತ್ಮಟ್ಟದ ಸಂಘಟನೆ ರಾಜಕೀಯ ಪಕ್ಷದ ಶಕ್ತಿಯ ಮೂಲವಾಗಿದ್ದು, ಹಲವು ವರ್ಷಗಳಿಂದ ಪಕ್ಷ ಬಲಪಡಿಸಲು ಕಾರ್ಯಕರ್ತರು ಶ್ರಮಿಸಿದ್ದಾರೆ. ಅವರ ಪರಿಶ್ರಮದಿಂದ ಪಕ್ಷ ಅಧಿಕಾರದ ಗದ್ದುಗೆ ಏರಿದೆ. ಆದ್ದರಿಂದ ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಯಶಸ್ವಿಯಾಗಿ ನಡೆಸಬೇಕು ಎಂದರು.
ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಕೈಗೊಳ್ಳುವ ಕ್ರಮಗಳು, ರಾಜಕೀಯ ಪಕ್ಷಗಳ ಜವಾಬ್ದಾರಿಗಳು, ಬೂತ್ಮಟ್ಟದ ಏಜೆಂಟರು(ಬಿಎಲ್ಎ) ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಕಾರ್ಯಕರ್ತರಿಗೆ ವಿವರಿಸಿದರು.
ಕೋಮುಲ್ ನಿರ್ದೇಶಕ ವಡಗೂರ್ ಹರೀಶ್, ಜಿಲ್ಲಾ ಯೂನಿಯನ್ ನಿರ್ದೇಶಕ ಹನುಮಂತು, ಮಂಜುನಾಥ್, ಮುಖಂಡ ಬಣಕಮಹಳ್ಳಿ ನಟರಾಜ್, ಟಿಎಪಿಎಂಎಸ್ ನಿರ್ದೇಶಕ ಸತೀಶ್ ಗೌಡ, ಭೂ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಇದ್ದರು.