Let a new toilet be constructed.
ಸರ್ಕಾರಿ ಉರ್ದು ಶಾಲೆಯಲ್ಲಿ ಶೌಚಗೃಹವಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಪಾತಪಾಳ್ಯ ಗ್ರಾಮಸ್ಥರು ದೂರಿದ್ದಾರೆ.
ಪಾತಪಾಳ್ಯ ಸರ್ಕಾರಿ ಹಿರಿಯ ಉರ್ದು ಶಾಲೆ ಆವರಣದಲ್ಲಿ ನಿರ್ಮಿಸಿರುವ ಶೌಚಗೃಹ ತೆರವುಗೊಳಿಸಿ ನೂತನ ಶೌಚಗೃಹ ನಿರ್ಮಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ-.
— ಹುಸೇನ್ಖಾನ್, ಎಸ್ಡಿಎಂಸಿ ಮಾಜಿ ಅಧ್ಯಕ್ಷ, ಪಾತಪಾಳ್ಯ
ಬಾಗೇಪಲ್ಲಿ ತಾಲೂಕು ಪಾತಪಾಳ್ಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಒಬ್ಬ ಶಿಕ್ಷಕ ಹಾಗೂ ನಾಲ್ಕು ಜನ ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆ ಆವರಣದಲ್ಲಿ 20 ವರ್ಷಗಳ ಹಿಂದೆ ಎರಡು ಶೌಚಗೃಹ ನಿರ್ಮಿಸಿದ್ದು, ಶಿಥಿಲಾವಸ್ಥೆಗೆ ತಲುಪಿ ಬಳಕೆಗೆ ಬಾರದಂತಾಗಿದೆ. ಶೌಚಗೃಹವಿಲ್ಲದೆ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ.
ಪಾತಪಾಳ್ಯ ಸರ್ಕಾರಿ ಉರ್ದು ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮೇಲಾಧಿಕಾರಿಯವರ ಗಮನಕ್ಕೆ ತಂದು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.
— ಕೆ.ಎಸ್.ಶ್ರೀಕಾಂತ್, ಪಿಡಿಒ ಪಾತಪಾಳ್ಯ.
ಶಿಕ್ಷಕಿಯರು ಶೌಚಕ್ಕಾಗಿ ಸಮೀಪದ ಮನೆಗಳಿಗೆ ಹೋಗಬೇಕಾಗಿದೆ. ಅಲ್ಲದೇ ಶಾಲೆಯಿಂದ ಹೊರಬರುವ ಕಲುಷಿತ ನೀರು ಹರಿಯಲು ಕಾಲುವೆ ಇಲ್ಲದೆ ಶಾಲೆ ಹಿಂಭಾಗದಲ್ಲಿ ಶೇಖರಣೆಯಾಗಿ ಸಾಂಕ್ರಾಮಿಕ ಭೀತಿ ಉಂಟಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಹಳೇ ಶೌಚಗೃಹ ತೆರವುಗೊಳಿಸಿ ನೂತನ ಶೌಚಗೃಹ ನಿರ್ಮಿಸುವುದರ ಜತೆಗೆ ನೀರು ಹರಿಯಲು ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮದ ಚಂದ್ರ, ಮಂಜುನಾಥ ಮನವಿ ಮಾಡಿದ್ದಾರೆ.