ಬಸವನಬಾಗೇವಾಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿದರು. ರಾಹುಲ್ ಕುಬಕಡ್ಡಿ, ಕಲ್ಲು ಸೊನ್ನದ, ಸಂಗಮೇಶ ಸಗರ ಮತ್ತಿತರರಿದ್ದರು.
- ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜಾರಿ ಆಗ್ರಹ
- ಕೇಂದ್ರ ರಾಜ್ಯ ಸರ್ಕಾರ ಮುಂದಾಗಲಿ
ಬಸವನಬಾಗೇವಾಡಿ: ರಾಜ್ಯದ ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರ ಶ್ರಮಕ್ಕೆ ತಕ್ಕಂತೆ ಯೋಗ್ಯ ದರವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಘೋಷಣೆ ಮಾಡಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜಾರಿ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಯಾವುದೇ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆ ಸಿಗದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದು. ಅವರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾದಾಗ ಮಾತ್ರ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಿಲ್ಲಿಸಲು ಸಾಧ್ಯವಾಗುತ್ತದೆ. ಈಗ ಡಿಸಿಸಿ ಬ್ಯಾಂಕ್‌ನಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ಹೆಚ್ಚಳ ಮಾಡಿ, ಕನಿಷ್ಠ ಒಬ್ಬ ರೈತನಿಗೆ 15 ಲಕ್ಷಕ್ಕೂ ಹೆಚ್ಚು ರೂ. ಸಾಲ ಸೌಲಭ್ಯ ನೀಡಬೇಕು ಎಂದರು.
ಆಲಮಟ್ಟಿ ಜಲಾಯಶಯದ ಎತ್ತರವನ್ನು 524 ಮೀ.ಗೆ ಎತ್ತರಿಸುವಂತೆ ಆಗ್ರಹಿಸಲು ರಾಜ್ಯಮಟ್ಟದ ಬೃಹತ್ ಹೋರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲು ಮೇ 8ರಂದು ವಿಜಯಪುರ ನಗರದ ದರಬಾರ ಮೈದಾನದಲ್ಲಿ 4ನೇ ರಾಜ್ಯ ಮಟ್ಟದ ಬೃಹತ್ ರೈತ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯದ 5 ಜಿಲ್ಲೆಗಳ ರೈತರು ಮತ್ತು ಜನತೆ ನೀರಿನ ಸಮಸ್ಯೆಯ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವುದು ಅನಿವಾರ್ಯವಾಗಿದೆ. ಕಳೆದ ವರ್ಷ ಕಬ್ಬು ಬೆಳೆಗಾರರು ನಡೆಸಿದ ಹೋರಾಟ ಯಶಸ್ವಿಯಾಗಿದೆ ಆದರೆ ಸರ್ಕಾರ ಪ್ರತಿ ಟನ್ ಕಬ್ಬಿಗೆ ಕೇವಲ 3500 ನೀಡುತ್ತಿರುವುದು ಯೋಗ್ಯ ದರವಲ್ಲ. ಆ ದರವನ್ನು 5000 ರೂ. ಗಳಿಗೆ ನಿಗದಿ ಪಡಿಸಬೇಕು ಜತೆಗೆ ಸಕ್ಕರೆ ಕಾರ್ಖಾನೆಗಳ ಮುಂದೆ ಸರ್ಕಾರವೆ ವೇ ಬ್ರಿಡ್ಜ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ ಮಾತನಾಡಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಪ್ರ. ಕಾರ್ಯದರ್ಶಿ ರಾಮನಗೌಡ ಪಾಟೀಲ, ಸೋಮು ಬಿರಾದಾರ, ಅಮರಯ್ಯ ಹಿರೇಮಠ, ಸಿದ್ರಾಮ ಪಾತ್ರೋಟಿ, ಮಹಾದೇವ ಬನಸೋಡೆ, ಸಂಗಪ್ಪ ಟಕ್ಕೆ, ಶಶಿಕಾಂತ ಬಿರಾದಾರ, ಮಹಾದೇವ ಗುಡದಿನ್ನಿ, ಹೇಮು ರಾಠೋಡ, ರಮೇಶ ಗಚ್ಚಿನವರ, ಬಸವರಾಜ ನಾಯ್ಕರ, ಸಿದ್ದು ಕುಂಬಾರ, ಶಿವಶಂಕರ ಅಂಬಲಿ, ಭಾಗು ಚೌಧರಿ ಮತ್ತಿತರರಿದ್ದರು.