ಚನ್ನರಾಯಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿಯನ್ನು ಶಾಸಕ ಸಿ.ಎನ್.ಬಾಲಕೃಷ್ಣ ಸ್ವಾಗತಿಸಿದರು. ಕೆ.ಟಿ.ಆನಂದ್, ಕೆ.ಎನ್.ಅನಿಲ್, ವಿ.ಜಿ.ದ್ಯಾವೇಗೌಡ, ಸಿ.ಎನ್.ಗೋಪಾಲ್ ಇತರರು ಇದ್ದರು.
ಚನ್ನರಾಯಪಟ್ಟಣ: ಕ್ರೀಡಾಂಗಣಗಳ ಅಭಿವೃದ್ಧಿ ಹಾಗೂ ಕ್ರೀಡಾಪಟುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು 100 ಕೋಟಿ ಹಣವನ್ನು ವಿಶೇಷವಾಗಿ ಮೀಸಲಿಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಒತ್ತಾಯಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಚೇರಿ ಹಾಗೂ ತಾಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಯೋಗದಲ್ಲಿ ಪ್ರಸಕ್ತ ಸಾಲಿನ 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಅನೇಕ ಕ್ರೀಡಾಂಗಣಗಳಲ್ಲಿ ಕ್ರೀಡಾಪಟುಗಳಿಗೆ ಅಗತ್ಯ ತರಬೇತಿ ಸೌಲಭ್ಯ, ಉತ್ತಮ ಮೈದಾನ, ಕುಡಿಯುವ ನೀರು, ಶೌಚಗೃಹ, ಬೆಳಕಿನ ವ್ಯವಸ್ಥೆ ಹಾಗೂ ಕ್ರೀಡಾ ಉಪಕರಣಗಳ ಕೊರತೆಯಿದೆ. ಇಂತಹ ಸಂದರ್ಭದಲ್ಲಿ ಇಡೀ ರಾಜ್ಯದ ಕ್ರೀಡಾಂಗಣಗಳ ಅಭಿವೃದ್ಧಿಗೆ 14 ಕೋಟಿ ರೂ. ಅನುದಾನ ಮೀಸಲಿಡುವುದು ಅತ್ಯಂತ ಕಡಿಮೆ ಮೊತ್ತವಾಗಿದೆ. ಕ್ರೀಡಾಂಗಣಗಳು ಸೂಕ್ತ ನಿರ್ವಹಣೆ ಹಾಗೂ ಮೂಲಸೌಕರ್ಯದ ಕೊರತೆಯಿಂದ ಬಳಲುತ್ತಿವೆ. ಗ್ರಾಮೀಣ ಪ್ರದೇಶಗಳ ಕ್ರೀಡಾಪಟುಗಳಿಗೆ ಸಮರ್ಪಕ ತರಬೇತಿ ಹಾಗೂ ಅಭ್ಯಾಸದ ಅವಕಾಶ ಕಲ್ಪಿಸಲು ಸುಸಜ್ಜಿತ ಕ್ರೀಡಾಂಗಣಗಳ ಅಗತ್ಯವಿದೆ. ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ನೀಡುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶ ಕಲ್ಪಿಸಬಹುದು. ಆದ್ದರಿಂದ ಸರ್ಕಾರವು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಬಜೆಟ್‌ನಲ್ಲಿ 100 ಕೋಟಿ ಅನುದಾನ ಮೀಸಲಿಡಬೇಕು. ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಮುಂದಾದರೆ ರಾಜ್ಯದ ಯುವಜನರಲ್ಲಿ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಲಿದ್ದು, ಉತ್ತಮ ಕ್ರೀಡಾಪಟುಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದರು.
ಕ್ರೀಡಾಂಗಣಗಳ ಅಭಿವೃದ್ಧಿಗೆ ಮೀಸಲಿಡುವ ಅನುದಾನವನ್ನು ಹೊಸ ಕ್ರೀಡಾ ಮೈದಾನಗಳ ನಿರ್ಮಾಣ, ಹಳೆಯ ಕ್ರೀಡಾಂಗಣಗಳ ನವೀಕರಣ, ಆಟದ ಸಲಕರಣೆಗಳ ಖರೀದಿ, ಒಳಾಂಗಣ ಕ್ರೀಡಾ ಸೌಲಭ್ಯಗಳ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳಿಗೆ ಬಳಸಬಹುದು. ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಕ್ರೀಡಾಪಟುಗಳಿಗೆ ಗುಣಮಟ್ಟದ ತರಬೇತಿ ಹಾಗೂ ಉತ್ತಮ ಮೂಲಸೌಕರ್ಯ ಒದಗಿಸಿದಾಗ ಮಾತ್ರ ರಾಜ್ಯದಿಂದ ರಾಷ್ಟ್ರಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭೆಗಳನ್ನು ಬೆಳೆಸಲು ಸಾಧ್ಯ. ಆದ್ದರಿಂದ ಸರ್ಕಾರವು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಕ್ರೀಡಾಂಗಣಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ 100 ಕೋಟಿ ಅನುದಾನ ಮೀಸಲಿಡಬೇಕು ಎಂದರು.
ಶಿಕ್ಷಣದಷ್ಟೇ ಆದ್ಯತೆ ಸಿಗಲಿ: ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಶಿಕ್ಷಣದಷ್ಟೇ ಆದ್ಯತೆ ಕ್ರೀಡೆಗಳಿಗೂ ಇರಬೇಕು. ಯುವ ಪ್ರತಿಭೆಗಳು ಶಾಲಾ ಕಾಲೇಜುಗಳಲ್ಲಿ ಆಯೋಜಿಸುವ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.
ಈ ಕ್ರೀಡೆಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸುವವರಿಗೆ ವಿಶೇಷ ನೆರವು ನೀಡಲಾಗುವುದು. ಮಕ್ಕಳ ಆಸಕ್ತಿ ಗಮನಿಸಿ ಶಿಕ್ಷಕರು ಅವರನ್ನು ಪ್ರೋತ್ಸಾಹಿಸಬೇಕು. ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಸೋಲು ಯಾವುದೇ ಕಾರಣಕ್ಕೂ ನಿರಾಸೆ ಉಂಟು ಮಾಡದೇ ಮತ್ತೆ ಗೆಲ್ಲುವ ಛಲ ಹುಟ್ಟಿಸಬೇಕು ಎಂದರು.
ಬಿಇಒ ಎಚ್.ಎನ್.ದೀಪಾ ಮಾತನಾಡಿ, ಕ್ರೀಡಾಕೂಟದ ಬಹುಮಾನ, ಮಕ್ಕಳಿಗೆ ಮಧ್ಯಾಹ್ನದೂಟದ ಪ್ರಾಯೋಜಕತ್ವವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅವರೇ ಮಾಡಿದ್ದು, ಇದರಿಂದ ಇಲಾಖೆ ಯಶಸ್ವಿಯಾಗಿ ಕ್ರೀಡಾಕೂಟ ಆಯೋಜಿಸಲು ಸಹಕಾರಿಯಾಗಿದೆ ಎಂದರು.
ಕ್ರೀಡಾಕೂಟದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್.ಅನಿಲ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಟಿ.ಆನಂದ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್.ಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಜಿ.ದ್ಯಾವೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಆರ್.ಮಂಜುನಾಥ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಮೋದ್, ಕ್ರೀಡಾಕೂಟದ ಸಂಘಟನಾ ಅಧ್ಯಕ್ಷ ಬಿ.ಎನ್.ಶ್ರೀನಿವಾಸಮೂರ್ತಿ, ಸಂಘಟನಾ ಕಾರ್ಯದರ್ಶಿ ಡಿ.ಆರ್.ಪುಷ್ಪಾ, ಖಜಾಂಚಿ ಪದ್ಮಿನಿ, ಶಿಕ್ಷಣ ಸಂಯೋಜಕ ಜೆ.ಇ.ಲೋಕೇಶ್, ಸಮೂಹ ಸಂಪನ್ಮೂಲ ವ್ಯಕ್ತಿಗಳು ಶಿಕ್ಷಕರ ಸಂಘದ ಪದಾಧಿಕಾರಿಗಳು, ದೈಹಿಕ ಶಿಕ್ಷಕರು ಸೇರಿದಂತೆ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.