Leopard 
ರಾಜ್ಯ

ಬನ್ನೇರುಘಟ್ಟದಲ್ಲಿ ಸಫಾರಿ ಬಸ್​ ಮೇಲೆ ಎಗರಿದ ಚಿರತೆ: ಮಹಿಳೆ ಕೈ ಪರಚಿ ಗಾಯ! ವಿಡಿಯೋ ವೈರಲ್ | Leopard

ಪ್ರಮುಖ ಮುಖ್ಯಾಂಶಗಳು

  • ಸಫಾರಿ ಬಸ್​ ಮೇಲೆ ಏಕಾಏಕಿ ದಾಳಿ ಮಾಡಿದ ಚಿರತೆ
  • ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಘಟನೆ
ಬೆಂಗಳೂರು: ಇಲ್ಲಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯೊಂದು(Leopard) ಸಫಾರಿ ಬಸ್​ ಮೇಲೆ ಏಕಾಏಕಿ ದಾಳಿ ಮಾಡಿದ್ದು, ಬಸ್​ನಲ್ಲಿರುವ ಮಹಿಳೆ ಕೈಗೆ ಪರಚಿದ ಘಟನೆ ನಡೆದಿದೆ.
ತಮಿಳುನಾಡಿನ ಚೆನ್ನೈ ಮೂಲದ 56 ವರ್ಷದ ವಹಿತಾ ಬಾನು ದಾಳಿಗೊಳಗಾದ ಮಹಿಳೆ ಎಂದು ಗುರುತಿಸಲಾಗಿದೆ. ಚಿರತೆ ದಾಳಿ ಮಾಡಿದ ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಜಿಗಾನಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೀಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ವಿಡಿಯೋ ವೈರಲ್

ಗುರುವಾರ(ನ.13)ಸಫಾರಿಯ ಸಮಯದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ದಾಳಿಯ ವೀಡಿಯೊ ವೈರಲ್​ ಆಗಿದೆ. ಸಫಾರಿಯ ಸಮಯದಲ್ಲಿ ಏಕಾಏಕಿ ಬಂದ ಚಿರತೆ ಬಸ್ ಮೇಲೆ ಹಾರಿ ಕಿಟಕಿಯ ಮೂಲಕ ತನ್ನ ಹಲ್ಲಿನ ಮೂಲಕ ಮಹಿಳೆ ಕೈಗೆ ಪರಚಿ ಗಾಯ ಮಾಡಿದೆ. ಈ ಘಟನೆಗೆ ಸಂಬಂಧಪಟ್ಟ ಕೆಲ ದೃಶ್ಯಗಳು ವೈರಲ್​ ಆಗಿವೆ.

ಚಾಲಕರಿಗೆ ಎಚ್ಚರಿಕೆ

ಚಿರತೆ ಸಂಬಂಧಿತ ಘಟನೆಯ ನಂತರ ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸಲು ಚಾಲಕರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ, ಪ್ರತಿ ವಾಹನವು ಸಂಪೂರ್ಣ ಸುರಕ್ಷತಾ ತಪಾಸಣೆಗೆ ಒಳಗಾಗುವವರೆಗೆ ಉದ್ಯಾನವನವು ಎಲ್ಲಾ ಹವಾನಿಯಂತ್ರಣ ರಹಿತ ಬಸ್ ಸಫಾರಿಗಳನ್ನು ಸ್ಥಗಿತಗೊಳಿಸಿದೆ. ಅಲ್ಲದೆ, ಸಂದರ್ಶಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದವಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ ಆನ್‌ಲೈನ್‌ನಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಒಬ್ಬ ಬಳಕೆದಾರರು, "ಮನುಷ್ಯರಿಗೆ ನಾಗರಿಕ ಪ್ರಜ್ಞೆ ಯಾವಾಗ ಬರುತ್ತದೆ?" ಎಂದು ಬರೆದಿದ್ದಾರೆ. ಮತ್ತೊಬ್ಬರು, "ನಾವು ಮನುಷ್ಯರಾಗಿ ಕೆಲವು ಮೂಲಭೂತ ಪ್ರಜ್ಞೆಯನ್ನು ಹೊಂದಿರಬೇಕು ಇಲ್ಲದಿದ್ದರೆ ಯಾವುದೇ ರೀತಿಯ ಪರಿಣಾಮಗಳನ್ನು ಎದುರಿಸಲು ನಾವು ಸಿದ್ಧರಾಗಿರಬೇಕು" ಎಂದು ಕಾಮೆಂಟ್ ಮಾಡಿದ್ದಾರೆ(ಏಜೆನ್ಸೀಸ್​).