ಮಹದೇಶ್ವರ ಬೆಟ್ಟದಲ್ಲಿ ಬೋನಿಗೆ ಬಿದ್ದ ಚಿರತೆ: ಮೇ 10ರಂದು ಬಾಲಕನನ್ನು ಬಲಿ ಪಡೆದ ಆ ಚಿರತೆ ಇದೇನಾ? Leopard Caught
- ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೋನಿಗೆ ಬಿದ್ದ ಚಿರತೆ
- ಬೆಂಗಳೂರು ಮೂಲದ ಬಾಲಕನ ಮೇಲೆ ದಾಳಿ ಮಾಡಿ ಬಲಿ ಪಡೆದಿದ್ದ ಚಿರತೆ ಇದೇ ಎಂಬ ಅನುಮಾನ
- ನಾಗಮಲೆಯಲ್ಲಿ ಮೇ 10ರಂದು ಬೆಂಗಳೂರು ಮೂಲದ ಬಾಲಕನೊಬ್ಬನ ಮೇಲೆ ದಾಳಿ ಮಾಡಿ ಕೊಂದಿದ್ದ ಚಿರತೆ
- ಸೆರೆ ಸಿಕ್ಕಿರುವ ಚಿರತೆಯ ಚಹರೆಯನ್ನು ಗುರುತಿಸಿ ಮಾಹಿತಿ ನೀಡುತ್ತೇವೆಂದ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಡಿಸಿಎಫ್
ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೋನಿನಲ್ಲಿ ಚಿರತೆಯೊಂದು ( Leopard Caught ) ಸೆರೆಯಾಗಿದೆ. ಇತ್ತೀಚೆಗೆ ಬೆಂಗಳೂರು ಮೂಲದ ಬಾಲಕನ ಮೇಲೆ ದಾಳಿ ಮಾಡಿ, ಬಲಿ ಪಡೆದಿದ್ದ ಚಿರತೆ ಇದೇ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಇತ್ತೀಚೆಗೆ ನಾಗಮಲೆಗೆ ಪಾಲಕರೊಂದಿಗೆ ಬಂದಿದ್ದ ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಬಲಿ ಪಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಅರಣ್ಯದೊಳಗೆ ತುಮಕೂರು ಕೇಜ್ನಲ್ಲಿ ಚಿರತೆ ಸೆರೆಯಾಗಿದೆ. ಇದು ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆಯೋ ಅಥವಾ ಅಲ್ಲವೋ ಎಂಬ ಅನುಮಾನ ಗ್ರಾಮಸ್ಥರಲ್ಲಿ ಮೂಡಿದೆ.
ಈ ಕುರಿತು ಮಲೆ ಮಹದೇಶ್ವರ ವನ್ಯಜೀವಿ ಧಾಮದ ಡಿಸಿಎಫ್ ಮಾತನಾಡಿ, ಬಾಲಕನ ಬಲಿ ಪಡೆದ ಚಿರತೆ ಕ್ಯಾಮರಾ ಟ್ರ್ಯಾಪ್ನಲ್ಲಿ ಸೆರೆ ಸಿಕ್ಕಿತ್ತು. ಇದರ ಆಧಾರದ ಮೇಲೆ ಈಗ ಸೆರೆ ಸಿಕ್ಕಿರುವ ಚಿರತೆಯ ಚಹರೆ ಗುರುತಿಸಿ ಖಚಿತ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ನಾಗಮಲೆ ಹಾದಿಯಲ್ಲಿ ಬಾಲಕನ ಸಾವು
ಮಲೆ ಮಹದೇಶ್ವರ ಬೆಟ್ಟದ ಪವಿತ್ರ ಸ್ಥಳಗಳಲ್ಲಿ ಒಂದಾದ ನಾಗಮಲೆಯಲ್ಲಿ ಮೇ 10ರಂದು ಬೆಂಗಳೂರು ಮೂಲದ ಬಾಲಕನೊಬ್ಬನ ಮೇಲೆ ಚಿರತೆ ದಾಳಿ ನಡೆಸಿ, ಕೊಂದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಮೃತ ಬಾಲಕ ಹರ್ಷಿತ್ (10) ತನ್ನ ಕುಟುಂಬದೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ, ಅಲ್ಲಿಂದ ನಾಗಮಲೆ ಕಡೆಗೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದಾಗ ಹಠಾತ್ ದಾಳಿ ನಡೆಸಿದ ಚಿರತೆಯು ಬಾಲಕನನ್ನು ಹಿಡಿದು ಎಳೆದೊಯ್ದಿತು. ಈ ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ಪೋಷಕರು ಚೀರಾಡಿದ್ದರೂ, ಅಷ್ಟರಲ್ಲೇ ಬಾಲಕ ಚಿರತೆಯ ಬಾಯಿಗೆ ತುತ್ತಾಗಿ ಜೀವ ಕಳೆದುಕೊಂಡನು.
ಸುಮಾರು ಅರ್ಧ ಗಂಟೆಯ ನಂತರ ಕುತ್ತಿಗೆ ಮತ್ತು ಇತರ ಭಾಗಗಳು ರಕ್ತಸಿಕ್ತ ಸ್ಥಿತಿಯಲ್ಲಿ ಶವ ಪತ್ತೆಯಾಯಿತು. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಇದೇ ಪ್ರದೇಶದಲ್ಲಿ ಚಿರತೆ ದಾಳಿಗೆ ಪಾದಯಾತ್ರಿಯೊಬ್ಬರು ಬಲಿಯಾಗಿದ್ದರು. ಆ ಘಟನೆಯ ಮಾಸುವ ಮುನ್ನವೇ ಈಗ ಬಾಲಕನೊಬ್ಬ ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ಮತ್ತು ಭಕ್ತಾದಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅರಣ್ಯ ಇಲಾಖೆಗೆ ಸಾರ್ವಜನಿಕರ ಆಗ್ರಹ
ನಾಗಮಲೆಗೆ ಹೋಗುವ ಪಾದಯಾತ್ರಿಗಳ ಸುರಕ್ಷತೆಗೆ ಅರಣ್ಯ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಈ ನರಭಕ್ಷಕ ಚಿರತೆಯನ್ನು ಕೂಡಲೇ ಸೆರೆಹಿಡಿಯಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ. ಚಿರತೆ ದಾಳಿ ಸಂಭವಿಸುವ ಸಾಧ್ಯತೆಯಿರುವ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸುವಂತೆ ಮತ್ತು ಸೂಕ್ತ ನಾಮಫಲಕಗಳನ್ನು ಹಾಕುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.