ದಾಬಸ್​ಪೇಟೆ ಚಿರತೆ  
ರಾಜ್ಯ

ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ ಚಿರತೆ, ಕರಡಿ ಪ್ರತ್ಯೆಕ್ಷ / DABASPETE

ದಾಬಸ್​ಪೇಟೆ : ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಸೀಗೆಪಾಳ್ಯ ಹಾಗೂ ಗೊಲ್ಲರಹಟ್ಟಿ ಬಳಿ ಬುಧವಾರ ರಾತ್ರಿ ಚಿರತೆ ಹಾಗೂ ಕರಡಿ ಕಾಣಿಸಿಕೊಂಡಿದ್ದು, ಸ್ಥಳಿಯ ಜನರಲ್ಲಿ ಆತಂಕ ಸೃಷ್ಟಿಸಿದೆ.
ಶಿವಗಂಗೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಆಶ್ರಯ ಪಡೆದಿರುವ ಚಿರತೆಗಳು ಗೊಲ್ಲರಹಟ್ಟಿಗೆ ರಾತ್ರಿ ವೇಳೆ ಲಗ್ಗೆ ಇಟ್ಟಿದ್ದು, ಈ ದೃಶ್ಯಗಳು ಸ್ಥಳಿಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ. ದೃಶ್ಯಾವಳಿಗಳನ್ನು ಗಮನಿಸಿದ ಗ್ರಾಮಸ್ಥರು ತಣವೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಒಂದೇ ರಾತ್ರಿಯಲ್ಲಿ ಕರಡಿ ಹಾಗೂ ಚಿರತೆಗಳೆರಡೂ ಕಾಣಿಸಿಕೊಂಡಿರುವುದರಿಂದ ಮುಂಜಾನೆ ಮತ್ತು ಸಂಜೆ ವೇಳೆ ಕಾರ್ಖಾನೆಗಳಿಗೆ ತೆರಳುವ ಕಾರ್ಮಿಕರು, ರೈತರು ಹಾಗೂ ಶಾಲಾ&ಕಾಲೇಜು ವಿದ್ಯಾರ್ಥಿಗಳು ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಶಿವಗಂಗೆ ಸಮೀಪ ಚಿರತೆಯೊಂದು ಮಹಿಳೆಯ ಮೇಲೆ ದಾಳಿ ಮಾಡಿದ್ದರಿಂದ ಜನರ ಆತಂಕ ಇಮ್ಮಡಿಯಾಗಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ : ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿದರು. ಸಂಜೆಯಾದ ನಂತರ ಅರಣ್ಯದ ಕಡೆಗೆ ಯಾರೂ ಹೋಗಬಾರದು. ಜಾನುವಾರುಗಳನ್ನು ಮೇಯಿಸಲು ಬಿಡದೆ, ಸುರತ ಸ್ಥಳಗಳಲ್ಲಿ ಕಟ್ಟಿಹಾಕಬೇಕು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕರಡಿ ಮತ್ತು ಚಿರತೆಯ ಚಲನವಲನಗಳ ಮೇಲೆ ನಿರಂತರ ನಿಗಾ ಇಟ್ಟಿರುವುದಾಗಿ ತಿಳಿಸಿದ್ದಾರೆ.