CM DK Shivakumar 
ರಾಜ್ಯ

ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ ಪಕ್ಷದಿಂದ ಐವರು ಅಭ್ಯರ್ಥಿಗಳು ಕಣಕ್ಕೆ; ಖರ್ಗೆ ಅವರಿಂದ ನಾಮಪತ್ರ ಸಲ್ಲಿಕೆ: ಸಿಎಂ

ಬೆಂಗಳೂರು:ವಿಧಾನ ಪರಿಷತ್ ಅಭ್ಯರ್ಥಿಗಳು ಕೂಡ ನಾಮಪತ್ರ ಸಲ್ಲಿಸಲಿದ್ದು, ನಾವು ಐವರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದ್ದು, ಈಗಾಗಲೇ ನಾಲ್ವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಐದನೇ ಅಭ್ಯರ್ಥಿ ನಾಳೆ ಪ್ರಕಟಿಸಲಾಗುವುದು ಎಂದು CM ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿಗಳಾಗಿ ಮೊದಲ ದಿನದ ಅನುಭವ ಹೇಗಿತ್ತು ಎಂದು ಕೇಳಿದಾಗ, "ನಾನು ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ನನ್ನ ನೇತೃತ್ವದಲ್ಲಿ ಘೋಷಿಸಿದ ಭರವಸೆಗಳನ್ನು ಜನರಿಗೆ ಈಡೇರಿಸಿದ್ದೇವೆ. ರಾಜ್ಯದ ಜನ ನನ್ನ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದು, ಮೊದಲ ದಿನದಿಂದ ನಿರೀಕ್ಷೆಗಳಿವೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ನನ್ನನ್ನು ಪ್ರಶ್ನೆ ಮಾಡಿದಾಗ, ನನ್ನ ಶಾಸಕರ ಸಂಖ್ಯಾಬಲ 136 ಎಂದು ಹೇಳಿದ್ದೆ" ಎಂದು ತಿಳಿಸಿದರು.

ನಾಳೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ನಾಮಪತ್ರ ಸಲ್ಲಿಕೆ

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನಾಳೆ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಆಗಮಿಸುತ್ತಿದ್ದಾರೆ. ನಾಳೆ ಖರ್ಗೆ ಅವರ ನಾಮಪತ್ರ ಸಲ್ಲಿಕೆ ನಂತರ ಇತರೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ" ಎಂದು ಮಾಹಿತಿ ನೀಡಿದರು.

ಹರಿಪ್ರಸಾದ್ ಅವರಿಗೆ ಅಪಾರ ಅನುಭವವಿದೆ

ಈಗ ಕಾಂಗ್ರೆಸ್ ಪಕ್ಷದಲ್ಲಿ ಡಿಕೆ ಹಾಗೂ ಬಿಕೆ ಜೋಡಿ ನೇತೃತ್ವವಿದೆ ಎಂದು ಕೇಳಿದಾಗ, "ಅವರು ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ನಿಷ್ಠಾವಂತ ನಾಯಕರು, ಕಾರ್ಯಕರ್ತರು. ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ವಿಧಾನ ಪರಿಷತ್ ಸದಸ್ಯರಾಗಿದ್ದು, ನಾಳೆ ಕೂಡ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದು, ಅಪಾರ ಅನುಭವ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡಿದೆ. ನಾವೆಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಕರ್ತವ್ಯ. ನಮ್ಮ ಆಡಳಿತವನ್ನು ರಾಜ್ಯದ ಜನ ಗೌರವಿಸಿ, ಬೆಂಬಲಿಸುವ ವಿಶ್ವಾಸವಿದೆ. ಉತ್ತಮ ಆಡಳಿತ ನೀಡುವುದು ನಮ್ಮ ಗುರಿ ಎಂದರು.
ರಾಹುಲ್ ಗಾಂಧಿ ಅವರು ಆಗಮಿಸುತ್ತಿರುವುದರಿಂದ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮ ಮಾಡಲಾಗುವುದೇ ಎಂದು ಕೇಳಿದಾಗ, "ಈ ಕಾರ್ಯಕ್ರಮವನ್ನು ಬೇರೊಂದು ದಿನ ನಿಗದಿ ಮಾಡಲಾಗುವುದು. ಸಮಯದ ಕೊರತೆಯಿಂದ ನಾವು ಈ ಹಿಂದೆ ನಿಗದಿ ಮಾಡಿದ ಕಾರ್ಯಕ್ರಮ ಮುಂದೂಡಿದ್ದೇವೆ ಎಂದರು,(ಏಜೆನ್ಸೀಸ್).