ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ  
ರಾಜ್ಯ

ನರ್ಸಿಂಗ್, ಪಿಸಿಯೋಥೆರಫಿ ಕೋರ್ಸ್‌ಗೆ ಹೆಚ್ಚುವರಿ ಶುಲ್ಕ ಪಡೆದರೆ ಕಾನೂನು ಕ್ರಮ: ಆರೋಗ್ಯ ವಿವಿ ಎಚ್ಚರಿಕೆ

ಪ್ರಮುಖ ಮುಖ್ಯಾಂಶಗಳು

  • ಕೆಇಎ ಕೌನ್ಸೆಲಿಂಗ್ ಮೂಲಕವೇ ಪ್ರವೇಶ ಪ್ರಕ್ರಿಯೇ ಕೈಗೊಳ್ಳಬೇಕು. ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಯಾವುದೇ ರೀತಿಯಲ್ಲೂ ಉಲ್ಲಂಘಿಸದಂತೆ ಸೂಚಿಸಿದೆ.
  • ನಿಗದಿತ ಶುಲ್ಕವನ್ನು ಪೂರ್ಣ ಕೋರ್ಸ್ ಅವಧಿಯಲ್ಲಿ ಏಕರೂಪವಾಗಿ ಅನುಸರಿಸಬೇಕು.
  • ಮೊದಲ ವರ್ಷ ಹೆಚ್ಚಿನ ಶುಲ್ಕ ಪಡೆದು, ನಂತರದ ವರ್ಷಗಳಲ್ಲಿ ಅದನ್ನು ಕಡಿಮೆ ಮಾಡುವುದು ಅಥವಾ ಹೊಂದಾಣಿಕೆ ಮಾಡುವುದಕ್ಕೆ ಅನುಮತಿ ಇಲ್ಲ
ಬೆಂಗಳೂರು

ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚುವರಿ ಮೊತ್ತವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಿದ್ದಲ್ಲಿ ಸಂಬಂಧಪಟ್ಟ ನರ್ಸಿಂಗ್, ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಫಿಸಿಯೋಥೆರಪಿ ಕಾಲೇಜುಗಳು ಪ್ರವೇಶ ಪ್ರಕ್ರಿಯೆ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಎಚ್ಚರಿಕೆ ನೀಡಿದೆ.

ಕೆಇಎ ಕೌನ್ಸೆಲಿಂಗ್ ಮೂಲಕವೇ ಪ್ರವೇಶ ಪ್ರಕ್ರಿಯೇ ಕೈಗೊಳ್ಳಬೇಕು. ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಯಾವುದೇ ರೀತಿಯಲ್ಲೂ ಉಲ್ಲಂಘಿಸದಂತೆ ಸೂಚಿಸಿದೆ.
ನರ್ಸಿಂಗ್ ಪ್ರವೇಶಕ್ಕೆ ನಿಗದಿಪಡಿಸಿರುವ ಶುಲ್ಕದ ವಿವರಗಳನ್ನು ವಿಶ್ವವಿದ್ಯಾಲಯವು ತನ್ನ ಸಂಯೋಜಿತ ಸಂಸ್ಥೆಗಳಿಗೆ ಈಗಾಗಲೇ ತಿಳಿಸಲಾಗಿದೆ. ವಿಶ್ವವಿದ್ಯಾಲಯ ಮತ್ತು ಸರ್ಕಾರಕ್ಕೆ ಪಾವತಿಸಬೇಕಾದ ನಿಗದಿತ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ವಸೂಲಿ ಮಾಡಬೇಕು.
ನಿಗದಿತ ಶುಲ್ಕವನ್ನು ಪೂರ್ಣ ಕೋರ್ಸ್ ಅವಧಿಯಲ್ಲಿ ಏಕರೂಪವಾಗಿ ಅನುಸರಿಸಬೇಕು. ಮೊದಲ ವರ್ಷ ಹೆಚ್ಚಿನ ಶುಲ್ಕ ಪಡೆದು, ನಂತರದ ವರ್ಷಗಳಲ್ಲಿ ಅದನ್ನು ಕಡಿಮೆ ಮಾಡುವುದು ಅಥವಾ ಹೊಂದಾಣಿಕೆ ಮಾಡುವುದಕ್ಕೆ ಅನುಮತಿ ಇಲ್ಲವೆಂದು ಸ್ಪಷ್ಟಪಡಿಸಿದೆ.
ಪ್ರವೇಶ ಪಡೆಯಲು ಕಾಲೇಜು ಹಾಸ್ಟೆಲ್‌ನಲ್ಲಿ ಉಳಿಯುವುದು ಕಡ್ಡಾಯ ಎಂದು ವಿದ್ಯಾರ್ಥಿಗಳ ಮೇಲೆ ಒತ್ತಾಯ ಹೇರಬಾರದು. ಯಾವುದೇ ನೆಪದಲ್ಲಿ ಅನಧಿಕೃತ, ಹೆಚ್ಚುವರಿ ಶುಲ್ಕಗಳನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಬಾರದು.
ಕಾಲೇಜಿನ ವಿಳಾಸ, ಸಂಪರ್ಕ ವಿವರಗಳು, ಕೋರ್ಸ್ ಮಾಹಿತಿ, ಶುಲ್ಕದ ವಿವರಗಳು ಹಾಗೂ ಇತರ ಸಂಸ್ಥೆಯ ಮಾಹಿತಿಗಳು ನಿಖರವಾಗಿರಬೇಕು. ಸಂಸ್ಥೆಯ ವಿವರಗಳಲ್ಲಿ ಯಾವುದೇ ಬದಲಾವಣೆ ಉಂಟಾದಲ್ಲಿ, ಅದನ್ನು ನಿಗದಿತ ಮಾರ್ಗಸೂಚಿಗಳಂತೆ ತಕ್ಷಣವೇ ನವೀಕರಿಸಬೇಕು ಮತ್ತು ಅದನ್ನು ಸಂಬಂಧಿತ ಪ್ರಾಧಿಕಾರಗಳು ಹಾಗೂ ರಾಗಾಆವಿವಿ ಗಮನಕ್ಕೆ ಲಿಖಿತ ರೂಪದಲ್ಲಿ ತಲುಪಿಸಬೇಕು.
ಪ್ರವೇಶಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ, ಸಂವಹನ ಮತ್ತು ದಾಖಲೆಗಳ ನಿಖರತೆ ಹಾಗೂ ಹೊಣೆಗಾರಿಕೆಗೆ ಕಾಲೇಜುಗಳೇ ಜವಾಬ್ದಾರರಾಗಿರಬೇಕು.ಈ ನಿರ್ದೇಶನಗಳ ಉಲ್ಲಂಘನೆ ಕಂಡುಬಂದಲ್ಲಿ ಕಾನೂನುಗಳ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.