ದೊಡ್ಡಬಳ್ಳಾಪುರದ ಶಾಸಕರ ನಿವಾಸದಲ್ಲಿ ಹಳೆಕೋಟೆ ಮುಖಂಡರು ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಶ್, ಸಕ್ಕರೆಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಟಿ.ಹನುಮಂತಯ್ಯ, ಮುಖಂಡರಾದ ತಿಮ್ಮೆಗೌಡ, ಗಂಗಾಧರ್, ಕೆಂಪರಾಜು, ರಂಗನಾಥ್, ಸತೀಶ್, ಗ್ರಾಮದ ಮುಖಂಡರು ಇದ್ದರು.
ದೊಡ್ಡಬಳ್ಳಾಪುರ : ಶಾಸಕ ಧೀರಜ್ ಮುನಿರಾಜು ಅವರ ಕಾರ್ಯ ವೈಖರಿ ಹಾಗೂ ತಾಲೂಕಿನ ಅಭಿವೃದ್ಧಿ ಕಾರ್ಯ ಮೆಚ್ಚಿ ಹಳೆಕೋಟೆ ಮುಖಂಡರು ಮತ್ತು ಕಾರ್ಯಕರ್ತರು ಸಕ್ಕರೆಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಟಿ.ಹನುಮಂತಯ್ಯ ನೇತೃತ್ವದಲ್ಲಿ ವಿವಿಧ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ನಗರದ ಶಾಸಕರ ನಿವಾಸದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹಳೆಕೋಟೆ ಮುಖಂಡರಿಗೆ ಶಾಸಕ ಧೀರಜ್ ಮುನಿರಾಜು ಪಕ್ಷದ ಶಾಲು ಹಾಕುವ ಮೂಲಕ ಬಿಜೆಪಿಗೆ ಸ್ವಾಗತಿಸಿದರು. ಶಾಸಕ ಧೀರಜ್ ಮುನಿರಾಜು ಮಾತನಾಡಿ, ಕೇಂದ್ರದ ಮಹಾತ್ವಕಾಂಕ್ಷಿ ಯೋಜನೆ ಆದರ್ಶ ಗ್ರಾಮ ಯೋಜನೆಗೆ ಹಳೇಕೋಟೆ ಆಯ್ಕೆಯಾಗಿದೆ. ಇದರಿಂದ ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಅವರ ಸಹಕಾರ ಪಕ್ಷಕ್ಕೆ ಅಗತ್ಯ ಎಂದು ಹೇಳಿದರು.
ಸಕ್ಕರೆಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಟಿ.ಹನುಮಂತಯ್ಯ ಮಾತನಾಡಿ, ಶಾಸಕರ ಅಭಿವೃದ್ಧಿ ಕಾರ್ಯ ಮೆಚ್ಚಿ ಹಳೇಕೋಟೆ ಗ್ರಾಮಸ್ಥರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಗ್ರಾಮದಲ್ಲಿ 70ಕ್ಕೂ ಹೆಚ್ಚು ದಲಿತರ ಕುಟುಂಬಗಳಿದ್ದು, ಇದೀಗ ಪ್ರತಿ ಮನೆಯಲ್ಲೂ 2 ರಿಂದ 3 ಕುಟುಂಬಗಳು ವಾಸವಾಗಿವೆ. ನಿವೇಶನ ಕೊರತೆಯಿಂದಾಗಿ ಜನರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಯಲು ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಗೆ ಗ್ರಾಮದಲ್ಲಿ 2.36 ಗುಂಟೆ ಜಾಗ ಗುರುತಿಸಿದ್ದು, ಅಶ್ರಯ ಯೋಜನೆಗೆ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ. ಸ್ಮಶಾನಕ್ಕೆ 2 ಎಕರೆ ಜಾಗ ಮಂಜೂರಾಗಿದ್ದು, ಸ್ಮಶಾನದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಗ್ರಾಪಂ ವ್ಯಾಪ್ತಿಗೆ ಕನಿಷ್ಠ 1 ಸಾವಿರ ಮೀಟರ್ ಚರಂಡಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ನೀಡಿ ಗ್ರಾಮದ ಅಭಿವೃದ್ಧಿಗೆ ಶಾಸಕರ ಸಹಕಾರ ಕೇಳಿದ್ದೇವೆ ಎಂದರು.