ರಾಜಕುಮಾರ ಪಾಟೀಲ್ ತೆಲ್ಕೂರ್
- ಗೊಬ್ಬರ-ಬೀಜಕ್ಕೆ ರೈತ ಸಂಪರ್ಕ ಕೇಂದ್ರಗಳಿಗೆ ಅಲೆದಾಟ
ಕಲಬುರಗಿ: ಮುಂಗಾರು ಆರಂಭವಾಗಿ ಬಿತ್ತನೆ ಕಾಲ ಬಂದರೂ ಜಿಲ್ಲೆಯ ರೈತರಿಗೆ ರಸಗೊಬ್ಬರವೂ ಇಲ್ಲ, ಬಿತ್ತನೆ ಬೀಜವೂ ಇಲ್ಲ. ರೈತ ಸಂಪರ್ಕ ಕೇಂದ್ರಗಳಿಗೆ ದಿನಗಟ್ಟಲೆ ಅಲೆದಾಡಿದರೂ ಖಾಲಿ ಕೈಯಲ್ಲಿ ವಾಪಸ್ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ, ಹೆಸರು, ಉದ್ದು, ಸೋಯಾ ಬಿತ್ತನೆ ಬೀಜ ಸಿಗುತ್ತಿಲ್ಲ. ಸ್ಟಾಕ್ ಬಂದಿಲ್ಲ ಎಂದು ಸಬೂಬು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಸರ್ಕಾರಿ ಕೇಂದ್ರದಲ್ಲಿ ಬೀಜ ಸಿಗದೆ ಅನಿವಾರ್ಯವಾಗಿ ಖಾಸಗಿ ಅಂಗಡಿಗೆ ಹೋದರೆ ನಕಲಿ ಬೀಜ, ಕಳಪೆ ಬೀಜವನ್ನು ಡಬಲ್ ರೇಟ್ಗೆ ಮಾರುತ್ತಿದ್ದಾರೆ ಎಂದು ದೂರಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳು ಫೋನ್ ಕರೆ ಸ್ವೀಕರಿಸುತ್ತಿಲ್ಲ. ರೈತ ಕೇಂದ್ರಕ್ಕೆ ಹೋದರೆ ಸಾಹೇಬ್ರು ಮೀಟಿಂಗ್ನಲ್ಲಿದ್ದಾರೆ ಎಂದು ಸಬೂಬು ಹೇಳುತ್ತಿದ್ದಾರೆ. ಪ್ರಧಾನಿ ಮೋದಿಯವರು ರೈತರಿಗಾಗಿ ಸಬ್ಸಿಡಿ ಗೊಬ್ಬರ, ಉಚಿತ ಬೀಜ ವಿತರಣೆ ಯೋಜನೆ ಕೊಟ್ಟಿದ್ದಾರೆ. ಆದರೆ ಕಲಬುರಗಿ ಜಿಲ್ಲೆಯಲ್ಲಿ ಅಧಿಕಾರಿಗಳು ಮತ್ತು ದಲ್ಲಾಳಿಗಳು ಸೇರಿ ರೈತರನ್ನು ಲೂಟಿ ಮಾಡುತ್ತಿದ್ದಾರೆ. ಬಿತ್ತನೆ ಸಮಯ ಮೀರಿದರೆ ಒಂದು ವರ್ಷದ ಬೆಳೆ ಹಾಳು. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಮೂರು ದಿನದೊಳಗೆ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ಬಿತ್ತನೆ ಬೀಜ ಮತ್ತು ಗೊಬ್ಬರ ದಾಸ್ತಾನು ಇಡಬೇಕು. ಜಿಲ್ಲಾಧಿಕಾರಿಗಳ ವಿಶೇಷ ತಂಡ ಎಲ್ಲಾ ಖಾಸಗಿ ಆಗ್ರೋ ಶಾಪ್ ಮೇಲೆ ದಾಳಿ ಮಾಡಿ, ನಕಲಿ ಬೀಜ, ಹೆಚ್ಚಿನ ದರದ ಗೊಬ್ಬರ ಜಪ್ತಿ ಮಾಡಬೇಕು. ನಕಲಿ ಬೀಜ ಮಾರಿದವರು, ಹೆಚ್ಚಿನ ದರದಲ್ಲಿ ಮಾರಾಟ ಮಾಡಿದವರ ಲೈಸೆನ್ಸ್ ಶಾಶ್ವತ ರದ್ದು ಮಾಡಿ ಜೈಲಿಗೆ ಹಾಕಬೇಕು. ಯಾವ ಕೇಂದ್ರದಲ್ಲಿ ಯಾವ ಬೀಜ&ಗೊಬ್ಬರ ಎಷ್ಟು ಸ್ಟಾಕ್ ಇದೆ ಎಂದು ಅಪ್ಡೇಟ್ ಮಾಡಿ ವೆಬ್ಸೈಟ್ನಲ್ಲಿ ಹಾಕಬೇಕು. ಜಿಲ್ಲಾಡಳಿತ ವಾರದೊಳಗೆ ರೈತರಿಗೆ ಗೊಬ್ಬರ&ಬೀಜ ಸಿಗುವಂತೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಾವಿರಾರು ರೈತರೊಂದಿಗೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ರೈತ ವಿರೋಧಿ ಸರ್ಕಾರ ಮತ್ತು ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ತೇಲ್ಕೂರ ಗುಡುಗಿದ್ದಾರೆ.