ಕಲಬುರಗಿಯಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಶ್ರೀ ಶಂಕರಾನಂದ ಸ್ವಾಮೀಜಿ, ಸುರೇಶ ಸಜ್ಜನ್​, ಬಸವರಾಜ ಬಳೂಂಡಗಿ, ಶಂಕರಲಿಂಗ ಕಲಶೆಟ್ಟಿ, ಮಲ್ಲಿನಾಥ ಪಾಟೀಲ್​, ಅಪ್ಪಾರಾವ ಪಾಟೀಲ್​, ಮಂಜುನಾಥ ಅಂಜುಟಗಿ, ಡಾ.ಕೆ.ಜಿ.ಬಿರಾದಾರ, ಸಂಗನಗೌಡ ಪಾಟೀಲ್​, ಶರಣಕುಮಾರ ಬಿಲ್ಲಾಡ, ಭೀಮರಾವ ಗುಜಗೊಂಡ ಇತರರಿದ್ದರು. 
ರಾಜ್ಯ

ಒಳಪಂಗಡ ಬಿಡಿ, ಸಂಘಟನೆ ಮಾಡಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯಾಧ್ಯಕ್ಷ ಸುರೇಶ ಸಜ್ಜನ್​ ಕರೆ
  • ಗಾಣಿಗ ಸಮಾಜದ ಎಸ್ಸೆಸ್ಸೆಲ್ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ
ಕಲಬುರಗಿ: ಒಳಪಂಗಡ ಬದಿಗಿಟ್ಟು ಗಾಣಿಗ ಸಮಾಜದ ಎಲ್ಲರೂ ಸಂಘಟಿತರಾಗುವ ಅವಶ್ಯಕತೆ ಇದೆ ಎಂದು ಗಾಣಿಗ ಸಮಾಜದ ರಾಜ್ಯ ರಾಜ್ಯಾಧ್ಯಕ್ಷ ಸುರೇಶ್​ ಸಜ್ಜನ್​ ಕರೆ ನೀಡಿದರು.
ಪಿಡಿಎ ಕಾಲೇಜಿನ ಸ್ಯಾಕ್​ ಸಭಾಂಗಣದಲ್ಲಿ ಗುಲ್ಬರ್ಗ ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜ ಒಗ್ಗಟ್ಟಾದಗಲೇ ಬಲಿಷ್ಠವಾಗಲು ಸಾಧ್ಯ. ನಮ್ಮ ಸಮಾಜವನ್ನು ಪ್ರೀತಿಸಿ, ಇನ್ನೊಂದು ಸಮಾಜವನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.
ಸಮಾಜದ ಬಗ್ಗೆ ಸ್ವಾಭಿಮಾನ ಇರಬೇಕು, ಸಮಾಜದಲ್ಲಿನ ಬಡವರು, ಅಶಕ್ತರನ್ನು ಮೇಲೆತ್ತುವ ಕೆಲಸ ಮಾಡಬೇಕು. ಸಂಟಿತರಾದಾಗ ಮುಂದಿನ ದಿನಗಳಲ್ಲಿ ರಾಜಕೀಯ ಪ್ರಾತಿನಿಧ್ಯ ದೊರೆಯಲಿದೆ. ಸಮಾಜದ ಸಂಘಟನೆಯಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕಿದೆ. ಭವಿಷ್ಯದಲ್ಲಿ ಒಳ್ಳೆಯ ಸ್ಥಾನಮಾನಗಳು ಸಿಗಲಿವೆ. ಹೀಗಾಗಿ ಯಾರು ನಿರಾಶರಾಗುವ ಅವಶ್ಯಕತೆ ಇಲ್ಲ ಎಂದರು.
ಆಳೂರು-ಚಳಕಾಪುರ ಸಿದ್ದಾರೂಢ ಮಠದ ಶ್ರೀ ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಮಾಜದಲ್ಲಿ ಎಲ್ಲರನ್ನೂ ಪ್ರೀತಿಸಿ, ನಮ್ಮತನ ಉಳಿಸಿಕೊಳ್ಳಬೇಕು. ಒಳಪಂಗಡ ಮರೆತು ಎಲ್ಲರೂ ಒಂದಾಗುವ ಕಾಲ ಸನ್ನಿಹಿತವಾಗಿದೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, ಗಾಣಿಗ ಸಮಾಜ ಆರ್ಥಿಕ, ಸಾಮಾಜಿಕವಾಗಿ ಸದೃಢವಾಗಿದೆ. ಆದರೆ ಒಗ್ಗಟ್ಟಿನ ಕೊರತೆಯಿಂದ ಹಿನ್ನಡೆ ಅನುಭವಿಸುತ್ತಿದೆ. 2ಎ ಮೀಸಲಾತಿ ಹೊರಗಿಡಬೇಕು ಎನ್ನುವ ಹುನ್ನಾರ ನಡೆದಿದೆ. ಅದಕ್ಕೆಲ್ಲ ಅವಕಾಶ ನೀಡದೆ ನಾವು ಒಗ್ಗಟ್ಟಾಗಿ ಹೋರಾಡಬೇಕಿದೆ. ಸಾಮಾಜದ ಕೆಲಸ ಬಂದಾಗ ಪಪಾತ ಮರೆತು ಶ್ರಮಿಸಬೇಕು ಎಂದರು.
ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಶಂಕರಲಿಂಗ ಕಲಶೆಟ್ಟಿ ಅಧ್ಯತೆ ವಹಿಸಿದ್ದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ಪ್ರಮುಖರಾದ ಮಲ್ಲಿನಾಥ ಪಾಟೀಲ್​, ಅಪ್ಪಾರಾವ ಪಾಟೀಲ್​, ಡಾ.ಕೆ.ಜಿ.ಬಿರಾದಾರ, ಸಂಗನಗೌಡ ಪಾಟೀಲ್​, ಶರಣಕುಮಾರ ಬಿಲ್ಲಾಡ, ಭೀಮರಾವ ಗುಜಗೊಂಡ, ಶಂಕರಗೌಡ ಪಾಟೀಲ್​, ದೇವಿಂದ್ರ ಬಿರಾದಾರ, ರುದ್ರಗೌಡ ಪಾಟೀಲ್​, ಬಸವರಾಜ ಡೊಳ್ಳಿ, ಕೆ.ಪುಂಡಲೀಕ, ಸವಿತಾ ಸಜ್ಜನ್​, ಸಿದ್ದಮ್ಮ ಕಲಶೆಟ್ಟಿ, ಮಲ್ಲಣ್ಣಗೌಡ ಪಾಟೀಲ್​, ನಿಂಗಣ್ಣಗೌಡ ಪಾಟೀಲ್​, ಅನಿಲಕುಮಾರ ಪಾಟೀಲ್​, ಸಿದ್ದಣ್ಣ ಸಜ್ಜನ್​ ಇತರರಿದ್ದರು.
ಕಲಬುರಗಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿನಲ್ಲಿ ಉತ್ತಮ ಅಂಕ ಗಳಿಸಿದ ಸಮಾಜದ ನೂರಾರು ಮಕ್ಕಳನ್ನು ಸತ್ಕರಿಸಲಾಯಿತು.
"

ಜೀವನದಲ್ಲಿ ಸಮಯದ ಪಾಲನೆ ಅಗತ್ಯ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಗಾಣಿಗ ಸಮಾಜದ ಜನ ತುಂಬಾ ಮುಗ್ಧರು. ಜಿಲ್ಲೆಯಲ್ಲಿ ಸಮಾಜದಿಂದ ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕು. ಗಾಣಿಗ ಸಮಾಜಕ್ಕೆ ಒಳ್ಳೆಯ ಸ್ಥಾನಮಾನ ಸಿಗಬೇಕು.

— > ಶ್ರೀ ಶಂಕರಾನಂದ ಸ್ವಾಮೀಜಿ, ಸಿದ್ಧಾರೂಢ ಮಠ, ಆಳೂರು-ಚಳಕಾಪುರ ಮಠ
"

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಾಜದ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುತ್ತಿರುವುದು ಸಂತಸದ ಸಂಗತಿ. ಬಡ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಎದುರಿಸುವ ಸಮಸ್ಯೆಗಳಿಗೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲುತ್ತೇವೆ. ನಿಮ್ಮೆಲ್ಲ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು.

— > ಸುರೇಶ ಸಜ್ಜನ್​, ರಾಜ್ಯಾಧ್ಯಕ್ಷ, ಗಾಣಿಗ ಸಮಾಜ