ಉದ್ಯೋಗ, ವ್ಯಾಪಾರ ಮತ್ತಿತರ ಉದ್ದೇಶಗಳಿಗಾಗಿ ಬೆಂಗಳೂರಿಗೆ ಬಂದು ನೆಲೆಸುವವರನ್ನು ಗುರಿಯಾಗಿಸಿಕೊಂಡು ಅವರಿಗೆ ಮನೆಗಳನ್ನು ಭೊಗ್ಯಕ್ಕೆ (ಲೀಸ್) ಕೊಡುವ ಹೆಸರಿನಲ್ಲಿ ಕೋಟ್ಯಂತರ ರೂ. ವಂಚಿಸುವ ಜಾಲಗಳು ನಗರದಲ್ಲಿ ಸಕ್ರಿಯವಾಗಿವೆ. ಈ ಬಗ್ಗೆ ಹಲವು ದೂರುಗಳು ದಾಖಲಾದರೂ ವಂಚನೆ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈಗ ಹೊಸದಾಗಿ ಮೂರು ಪ್ರಕರಣಗಳಲ್ಲಿ 14 ಮಂದಿಗೆ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಭೋಗ್ಯದ ಕರಾರು ಮಾಡಿಕೊಂಡು ಹಣ ಪಡೆದು, ಅದೇ ಮನೆಗಳನ್ನು ಬೇರೆಯವರ ಹೆಸರಿಗೆ ಮಾರಾಟ ಮಾಡುವುದು, ಮನೆಗಳ ದಾಖಲೆಗಳನ್ನು ಅಡಮಾನವಿಟ್ಟು ಬ್ಯಾಂಕ್ಗಳಲ್ಲಿ ಸಾಲ ಪಡೆಯುವುದು ಸೇರಿ ಹಲವು ರೀತಿಯಲ್ಲಿ ವಂಚನೆ ಎಸಗಲಾಗುತ್ತಿದೆ. ಪರಿಣಾಮ, ಜೀವನಪೂರ್ತಿ ದುಡಿದು ಕೂಡಿಟ್ಟ ಹಣವನ್ನು ಮನೆಗಾಗಿ ಹೂಡಿಕೆ ಮಾಡಿದ್ದವರು ತಮ್ಮದಲ್ಲದ ತಪ್ಪಿಗೆ ಬೀದಿಗೆ ಬೀಳುತ್ತಿದ್ದಾರೆ.
ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆ.ಎಸ್. ವಿಶ್ವನಾಥ್ ಮತ್ತು ಗಿರೀಶ್ ಎಂಬುವರ ವಿರುದ್ಧ ಭೋಗ್ಯ ಹೆಸರಿನಲ್ಲಿ 14 ಮಂದಿಗೆ ಕೋಟ್ಯಂತರ ರೂ. ವಂಚಿಸಿರುವ ಆರೋಪ ಕೇಳಿಬಂದಿದೆ. ಆರೋಪಿಗಳು ಮನೆಗಳನ್ನು ಲೀಸ್ಗೆ ನೀಡುವ ನೆಪದಲ್ಲಿ ಭೋಗ್ಯದಾರರಿಂದ ಲಕ್ಷಾಂತರ ರೂ. ಪಡೆದುಕೊಂಡಿದ್ದರು. ಬಳಿಕ, ಲೀಸ್ಗೆ ಪಡೆದವರಿಗೆ ತಿಳಿಯದಂತೆ ಸಂಬಂಧಿಕರು ಹಾಗೂ ಸ್ನೇಹಿತರ ಹೆಸರಿಗೆ ಮನೆಗಳನ್ನು ಮಾರಾಟ ಮಾಡಿರುವುದು ಮತ್ತು ಕ್ರಯಪತ್ರಗಳನ್ನು ಮಾಡಿಕೊಟ್ಟಿರುವ ಆರೋಪಗಳಿವೆ.
ಅಷ್ಟೇ ಅಲ್ಲದೆ, ಇದೇ ಆಸ್ತಿಗಳ ದಾಖಲೆಗಳನ್ನು ಬಳಸಿಕೊಂಡು ವಿವಿಧ ಬ್ಯಾಂಕ್ಗಳಲ್ಲಿ ಸಾಲ ಪಡೆದು, ಸಾಲ ಮರುಪಾವತಿಸದೆ ಬಿಟ್ಟಿರುವುದಾಗಿ ಸಂತ್ರಸ್ತರು ಆರೋಪಿಸಿದ್ದಾರೆ. ಕೆಲ ತಿಂಗಳು ಕಳೆದ ಬಳಿಕ ಬ್ಯಾಂಕ್ಗಳಿಂದ ಮನೆ ಖಾಲಿ ಮಾಡುವಂತೆ ನೋಟಿಸ್ಗಳು ಬಂದಾಗಲೇ ಸಂತ್ರಸ್ತರಿಗೆ ವಂಚನೆಯ ಸ್ವರೂಪ ತಿಳಿಯುತ್ತಿದೆ.
ಸರಸ್ವತಿನಗರದಲ್ಲಿ ಕೆ.ಎಸ್. ವಿಶ್ವನಾಥ್ ಎಂಬುವರು ನಾಲ್ಕು ಮನೆಗಳನ್ನು ಲೀಸ್ಗೆ ನೀಡುವ ಮೂಲಕ -ಠಿ;1.01 ಕೋಟಿ ವಂಚಿಸಿದ್ದಾರೆ. ಆರ್. ವಿಜಯ್ ಎಂಬುವರಿಗೆ 20 ಲಕ್ಷ ರೂ., ಎನ್. ಯೋಗೆಶ್ ಅವರಿಗೆ 20 ಲಕ್ಷ ರೂ., ಬಿ.ಎಲ್. ಮಹೇಶ್ಕುಮಾರ್ ಎಂಬುವರಿಗೆ 19 ಲಕ್ಷ ರೂ. ಹಾಗೂ ಜಿ. ಸುವರ್ಣ ಎಂಬುವರಿಗೆ 21 ಲಕ್ಷ ರೂ. ಪಡೆದು ಮನೆಗಳನ್ನು ಲೀಸ್ಗೆ ನೀಡಿದ್ದಾರೆ. ಇದೀಗ ಸಂತ್ರಸ್ತರು ತಮ್ಮ ಹಣ ವಾಪಸ್ ಪಡೆಯಲು ಪರದಾಡುವಂತಾಗಿದೆ. ಇದೇ ರೀತಿ, ಸುಬ್ಬಣ್ಣ ಗಾರ್ಡನ್ ನಿವಾಸಿ ಗಿರೀಶ್ ಎಂಬುವರು ಜ್ಯೋತಿ ಎಂಬುವರಿಗೆ 16 ಲಕ್ಷ ರೂ. ವಂಚಿಸಿರುವ ಆರೋಪವಿದೆ. ಗೋವಿಂದರಾಜನಗರ ವ್ಯಾಪ್ತಿಯಲ್ಲಿ ಗಿರೀಶ್ ವಿರುದ್ಧ 9 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರು ಲೀಸ್ಗೆ ಮನೆ ಪಡೆಯುವ ಮುನ್ನ ಆಸ್ತಿಯ ಮಾಲೀಕತ್ವದ ದಾಖಲೆಗಳು, ನೋಂದಾಯಿತ ಕ್ರಯಪತ್ರ, ಆಸ್ತಿಯ ಮೇಲಿರುವ ಸಾಲ ಅಥವಾ ಅಡಮಾನದ ವಿವರಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಸಾಧ್ಯವಾದಷ್ಟು ವಕೀಲರ ಮೂಲಕ ದಾಖಲೆಗಳ ಪರಿಶೀಲನೆ ಮಾಡಿಸಿಕೊಂಡು, ಹಣ ಪಾವತಿಸುವಾಗ ಬ್ಯಾಂಕ್ ವಹಿವಾಟು ನಡೆಸಿ, ಕರಾರು ಪತ್ರದಲ್ಲಿ ಹಣದ ಮೊತ್ತ, ಅವಧಿ, ಮರುಪಾವತಿ ಷರತ್ತುಗಳು ದಾಖಲಿಸಿಕೊಳ್ಳುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಸರಸ್ವತಿನಗರದಲ್ಲಿ ಮನೆಯನ್ನು ಭೋಗ್ಯ ಪಡೆದು ವಂಚನೆಗೆ ಒಳಗಾಗಿದ್ದೇವೆ. ಮನೆ ಮಾಲೀಕ ಕೆ.ಎಸ್. ವಿಶ್ವನಾಥ್ ಅವರ ಸ್ನೇಹಿತರು ಸೇರಿ ಮೂವರು 61 ಲಕ್ಷ ರೂ. ವಂಚನೆ ಮಾಡಿದ್ದಾರೆ. ಈಗ ಬ್ಯಾಂಕ್ನವರು ‘ಮನೆ ಖಾಲಿ ಮಾಡಿ, ಮನೆಯ ಮೆಲೆ 63 ಲಕ್ಷ ರೂ. ಬ್ಯಾಂಕ್ ಸಾಲವಿದೆ’ ಎಂದು ಹೇಳುತ್ತಿದ್ದಾರೆ. ದೂರು ದಾಖಲಿಸುತ್ತಿದ್ದಂತೆ ಮಾಲೀಕ ಮತ್ತು ಅವರ ಸ್ನೇಹಿತರು ಪರಾರಿಯಾಗಿದ್ದಾರೆ.| ಆರ್. ವಿಜಯ್, ಎನ್. ಯೋಗೇಶ್ ಸಂತ್ರಸ್ತರು
ಲೀಸ್ ಹೆಸರಿನಲ್ಲಿ ಹಣ ಕಳೆದುಕೊಂಡವರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗಳ ಮೆಟ್ಟಿಲೇರುತ್ತಿದ್ದಾರೆ. ಆದರೆ, ಕೆಲವು ಸಂದರ್ಭಗಳಲ್ಲಿ ಹಣಕಾಸು ಮತ್ತು ಆಸ್ತಿ ವಿಚಾರಗಳು ಸಿವಿಲ್ ಸ್ವರೂಪದ್ದಾಗಿದ್ದು, ನ್ಯಾಯಾಲಯದ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಪೊಲೀಸರು ಸಲಹೆ ನೀಡುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಕೆಲ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ಸ್ವೀಕರಿಸಲು ಹಿಂದೇಟು ಹಾಕಲಾಗುತ್ತಿದೆ ಎಂಬ ಅಸಮಾಧಾನವೂ ಕೇಳಿಬಂದಿದೆ.