ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ  
ರಾಜ್ಯ

ಅರಿವು ಕೇಂದ್ರಗಳಲ್ಲಿ ಜರ್ಮನ್ ಭಾಷೆ ಕಲಿಕೆ

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ರಾಜ್ಯದ 5,886 ಅರಿವು ಕೇಂದ್ರ (ಗ್ರಾಮ ಗ್ರಂಥಾಲಯ) ಬಲವರ್ಧನೆಗೆ ಹಾಗೂ ಕಲೆ ಮತ್ತು ಸಂಸ್ಕೃತಿ ವಿನಿಮಯಕ್ಕಾಗಿ ಜರ್ಮನಿಯ ಗೋಥೆ ಸಂಸ್ಥೆ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದ ಕಚೇರಿಯಲ್ಲಿ ಗುರುವಾರ ತಿಳಿವಳಿಕೆ ಒಪ್ಪಂದ ವಿನಿಮಯದ ಬಳಿಕ ಮಾತನಾಡಿದ ಅವರು, ಗೋಥೆ ಸಂಸ್ಥೆ ಕಲೆ, ಸಂಸ್ಕೃತಿ ಮತ್ತು ಶಿಕ್ಷಣ ಜಾಲವನ್ನು ರೂಪಿಸುವ ಮೂಲಕ ಗ್ರಾಮೀಣ ಯುವ ಸಮೂಹಕ್ಕೆ ನೆರವಾಗಲಿದೆ. ಮುಂದಿನ 2 ವರ್ಷದಲ್ಲಿ 1.8 ಕೋಟಿ ರೂ. ವೆಚ್ಚದಲ್ಲಿ 9 ಲಕ್ಷ ರೂ. ಮೌಲ್ಯದ ಮಕ್ಕಳ ಕಥಾ ಪುಸ್ತಕಗಳನ್ನು ಅರಿವು ಕೇಂದ್ರಗಳಿಗೆ ಕೊಡುಗೆಯಾಗಿ ನೀಡಲಿದೆ ಎಂದು ಮಾಹಿತಿ ನೀಡಿದರು.
ಇದಕ್ಕಾಗಿ ಕನೆಕ್ಟಿಂಗ್ ಡಾಟ್ಸ್ ಅಂದರೆ ವಿವಿಧ ಸಂಸ್ಥೆಗಳ ಅನುಭವವನ್ನು ಒಗ್ಗೂಡಿಸಿ, ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ, ಜನರ ನಡುವೆ ಇರುವ ಜ್ಞಾನ ಕಂದಕವನ್ನು ನಿವಾರಿಸಲು ಒಂದು ಉತ್ತಮ ಸಂಪರ್ಕ ಜಾಲವನ್ನು ರೂಪಿಸುತ್ತದೆ ಎಂದರು.
ರಾಜ್ಯದಲ್ಲಿ 5,928 ಗ್ರಾಮ ಪಂಚಾಯಿತಿಗಳಿದ್ದು, 5,886 ಅರಿವು ಕೇಂದ್ರ ಅಥವಾ ಗ್ರಾಮೀಣ ಗ್ರಂಥಾಲಯಗಳಿವೆ. ಇವುಗಳ ಗ್ರಂಥಪಾಲಕರ ಸಾಮರ್ಥ್ಯ ಬಲವರ್ಧನೆಗೆ ಪಂಚಾಯತ್ ರಾಜ್ ಇಲಾಖೆ ಮತ್ತು ಗೋಥೆ ಸಂಸ್ಥೆ ಒಗ್ಗೂಡಿ ಶ್ರಮಿಸಲಿವೆ. ಜತೆಗೆ ಜರ್ಮನಿ ಭಾಷೆ ಕಲಿಕೆ, ಕಲೆ, ಸಂಸ್ಕೃತಿಯ ವಿನಿಮಯ ಕಾರ್ಯಕ್ರಮದಡಿ ರಾಜ್ಯದ ಗ್ರಾಮೀಣ ಕಲೆಗಳನ್ನು ಜರ್ಮನಿಯ ಜನರಿಗೆ ಪರಿಚಯಿಸುವ ಹಾಗೂ ಜರ್ಮನಿಯ ಸಾಂಸ್ಕೃತಿಕ ಕಲೆಗಳನ್ನು ಕರುನಾಡ ಗ್ರಾಮೀಣ ಜನತೆಗೆ ವಿಶೇಷವಾಗಿ ಯುವಜನರಿಗೆ ಪರಿಚಯಿಸುವ ವಿನಿಮಯ ಕಾರ್ಯಕ್ರಮವನ್ನೂ ಆಯೋಜಿಸುತ್ತದೆ ಎಂದು ಸಚಿವರು ತಿಳಿಸಿದರು.
ಜರ್ಮನಿಯಲ್ಲಿ ಕುಶಲ ಕಾರ್ಮಿಕರ ಬೇಡಿಕೆ ಇದ್ದು, ಈ ಯೋಜನೆಯಡಿ ಗ್ರಾಮೀಣ ಭಾಗದ ಕುಶಲ ಯುವಜನರಿಗೆ ಜರ್ಮನ್ ಭಾಷೆಯನ್ನು ಕಲಿಸುವ ಮೂಲಕ ಭಾರತದ ಗ್ರಾಮೀಣ ಅಭ್ಯರ್ಥಿಗಳಿಗೆ ಜರ್ಮನಿಯಲ್ಲಿ ಉದ್ಯೋಗ ಪಡೆಯಲೂ ನೆರವಾಗಲಿದೆ ಎಂದರು.