ಬೆಂಗಳೂರು: ಲರ್ನರ್ಸ್ ಲೈಸೆನ್ಸ್ ಹೊಂದಿರುವ ವ್ಯಕ್ತಿಯನ್ನು ಕೂಡ ಪೂರ್ಣಪ್ರಮಾಣದ ಲೈಸೆನ್ಸ್ ಹೊಂದಿರುವವನು ಎಂದು ಅಪಘಾತ ಪರಿಹಾರ ಪ್ರಕರಣಗಳಲ್ಲಿ ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆಯಾದರೂ, ಅದು ಪ್ರತಿಯೊಬ್ಬರಿಗೂ ವಿಮಾ ರಕ್ಷಣೆ ಸಿಗುತ್ತದೆ ಎಂಬ ಖಚಿತ ಭರವಸೆ ನೀಡಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕಾರು ಡಿಕ್ಕಿಯಾಗಿ ಮೃತಪಟ್ಟ ನಾಲ್ಕು ವರ್ಷದ ಬಾಲಕನ ಪಾಲಕರಿಗೆ ಪರಿಹಾರ ನೀಡಲು ಆದೇಶಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾವೇಂದ್ರ ಸೀತಾರಾಮ ಶ್ರೀವತ್ಸ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಲರ್ನರ್ಸ್ ಲೈಸೆನ್ಸ್ ಕೂಡ ಕಾನೂನುಬದ್ಧ ಲೈಸೆನ್ಸ್ ಆಗಿದೆ. ಆದರೆ, ಅದು ಮೋಟಾರು ವಾಹನ ಕಾಯ್ದೆಯ ನಿಯಮಗಳಿಗೆ ಒಳಪಟ್ಟಿದೆ. ಲರ್ನರ್ಸ್ ಲೈಸೆನ್ಸ್ ಉಳ್ಳವರು ಕಾಯ್ದೆಯ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಬೇಕು. ಕಾರು ಚಲಾಯಿಸುವಾಗ ಪೂರ್ಣಪ್ರಮಾಣದ ಲೈಸೆನ್ಸ್ ಹೊಂದಿರುವ ವ್ಯಕ್ತಿಯು ಜತೆಗಿರಬೇಕು. ಅಲ್ಲದೆ, ವಾಹನದ ಹಿಂಭಾಗ ಮತ್ತು ಮುಂಬಾಗದಲ್ಲಿ ಎಲ್-ಬೋರ್ಡ್ ಚಿಹ್ನೆಗಳನ್ನು ಕಡ್ಡಾಯವಾಗಿ ಹಾಕಿರಬೇಕು. ಆಗ ಮಾತ್ರ ವಿಮಾ ಪರಿಹಾರ ದೊರಕುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ನಿಯಮಗಳನ್ನು ಪಾಲಿಸಲಾಗಿದೆ ಎಂಬುದನ್ನು ಚಾಲಕ ಸಾಬೀತುಪಡಿಸಿಲ್ಲ. ಆದ್ದರಿಂದ, ಪರಿಹಾರ ನೀಡಲು ಆದೇಶಿಸಿರುವ ನ್ಯಾಯಮಂಡಳಿಯ ಆದೇಶವನ್ನು ರದ್ದುಪಡಿಸಬೇಕು ಎಂದು ವಿಮಾ ಕಂಪನಿ ಕೋರಿತ್ತು. ಇಂತಹ ಪ್ರಕರಣದಲ್ಲಿ ವಿಮಾ ಕಂಪನಿಗೆ ಪ್ರಾಥಮಿಕ ಹೊಣೆಗಾರಿಕೆ ಇಲ್ಲ ಎಂದು ನ್ಯಾಯಾಲಯ ಒಪ್ಪಿಕೊಂಡಿದೆಯಾದರೂ, ಮೃತ ಮಗುವಿನ ಪಾಲಕರು ಪ್ರಕರಣದ ಮೂರನೇ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಪೇ ಆ್ಯಂಡ್ ರಿಕವರಿ ತತ್ವದಡಿಯಲ್ಲಿ ಅವರಿಗೆ ಪರಿಹಾರದ ಹಣವನ್ನು ಪಾವತಿಸಿ, ನಂತರ ಅದನ್ನು ವಾಹನ ಮಾಲೀಕನಿಂದ ವಸೂಲಿ ಮಾಡಿಕೊಳ್ಳಬಹುದು ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
2020ರ ಡಿ.26ರಂದು ಚಿಕ್ಕೋಡಿಯ ಮಲ್ಲಪ್ಪ ಬೀರಪ್ಪ ಬಿರದಾರ ಎಂಬವರ ನಾಲ್ಕು ವರ್ಷದ ಮಗು ಉದಯಕುಮಾರ್ ಮನೆ ಮುಂದಿನ ರಸ್ತೆಯಲ್ಲಿ ನಿಂತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿಯಾಗಿತ್ತು. ಪರಿಣಾಮ ಮಗು ಸ್ಥಳದಲ್ಲಿಯೇ ಮೃತಪಟ್ಟಿತ್ತು. ಕಾರು ಚಾಲಕ ಆರವಿಂದ್ ಸಿದ್ದರಾಮಪ್ಪ ಬುರ್ಲಿ ವಿರುದ್ಧ ಚಿಕ್ಕೋಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತನ ಬಳಿ ಲರ್ನರ್ಸ್ ಲೈಸೆನ್ಸ್ ಮಾತ್ರ ಇತ್ತು.