ಕೀರ್ತಿನಾರಾಯಣ ಸಿ. ಬೆಂಗಳೂರು
ಕರ್ನಾಟಕ ಉಗ್ರರ ಟಾರ್ಗೆಟ್ ಲಿಸ್ಟ್ನಲ್ಲಿದೆ ಎಂಬುದು ಪದೇಪದೆ ಸಾಬೀತಾಗುತ್ತಿದೆ. ಅನ್ಯ ಧರ್ಮದ ಸ್ಥಳೀಯ ಯುವಕರ ಬ್ರೖೆನ್ವಾಶ್ ಮಾಡುವ ಮೂಲಕ ಅವರನ್ನು ಉಗ್ರ ಸಂಘಟನೆಗೆ ಸೇರಿಸಿಕೊಂಡು ಸ್ಥಳೀಯವಾಗಿಯೇ ಬಾಂಬ್ ತಯಾರಿಸುವುದನ್ನು ಕಲಿಸಿಕೊಟ್ಟು ದೊಡ್ಡಮಟ್ಟದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಐಸಿಸ್ ಉಗ್ರರು ಸಂಚು ರೂಪಿಸಿದ್ದ ಸಂಗತಿ ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಭದ್ರಾವತಿಯಲ್ಲಿ ಆ.10ರಂದು ಸೆರೆಸಿಕ್ಕ ಶಂಕಿತ ಯುವಕ ಮೊಹಮದ್ ಗೌಸ್ ಅಲಿಯಾಸ್ ನಿಹಾಲ್ (21), ಐಸಿಸ್ ಉಗ್ರರ ಜತೆ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನ.11ರಂದು ಎಫ್ಐಆರ್ ದಾಖಲಿಸಿಕೊಂಡಿರುವ ಬೆಂಗಳೂರು ಎನ್ಐಎ ಅಧಿಕಾರಿಗಳು, ಅಧಿಕೃತವಾಗಿ ಕೇಸ್ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಮೊಹಮದ್ ಗೌಸ್ ವಿಚಾರಣೆ ವೇಳೆ ಹಲವು ಸ್ಪೋಟಕ ವಿಚಾರಗಳು ಬಯಲಾಗಿವೆ.
ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಐಸಿಸ್ ಹಾಗೂ ಬೇರೆ ಉಗ್ರ ಸಂಘಟನೆಗಳಿಂದ ನಿಹಾಲ್ ಪ್ರಭಾವಿತನಾಗಿದ್ದ. ಎಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ಉದ್ಯೋಗಿಯಾಗಿದ್ದ ನಿಹಾಲ್, ಬೇರೆಬೇರೆ ಉಗ್ರ ಸಂಘಟನೆಗಳ ಮುಖಂಡರ ಜತೆ ಸಂಪರ್ಕ ಹೊಂದಿದ್ದ. ಅವರ ಅಣತಿಯಂತೆ ಸ್ಥಳೀಯವಾಗಿಯೇ ಕಚ್ಚಾ ಸಾಮಗ್ರಿಗಳನ್ನು ಬಳಸಿ ಸುಧಾರಿತ ಸ್ಪೋಟಕ ಸಾಧನ(ಐಇಡಿ)ಗಳನ್ನು ತಯಾರಿಸುವುದನ್ನು ಕಲಿಯುತ್ತಿದ್ದ. ಇದಕ್ಕಾಗಿ ಬೇರೆಬೇರೆ ಮೂಲಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸಿ ಸಂಗ್ರಹಿಸಿದ್ದ ಎಂದು ಎನ್ಐಎ ತಿಳಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅನ್ಯ ಧರ್ಮದ ಯುವಕರನ್ನು ಸಂರ್ಪಸುತ್ತಿದ್ದ ನಿಹಾಲ್, ಉಗ್ರವಾದದ ವಿಚಾರಗಳನ್ನು ಹೇಳುತ್ತಾ ಅವರ ಮನಃಪರಿವರ್ತಿಸಿ ಮೂಲಭೂತವಾದಕ್ಕೆ ಸೆಳೆಯುತ್ತಿದ್ದ.
ವೈದ್ಯ ವಿದ್ಯಾರ್ಥಿ ಜತೆ ನಂಟು: 2026ರ ಮಾ.15ರಂದು ಉತ್ತರಪ್ರದೇಶದ ಮೊರಾದಾಬಾದ್ನಲ್ಲಿ ದ್ವಿತೀಯ ವರ್ಷದ ಬಿಡಿಎಸ್ ಓದುತ್ತಿದ್ದ ಹ್ಯಾರಿಸ್ ಅಲಿ ಅಲಿಯಾಸ್ ಹಾರೀಶ್ ಅಲಿ (19) ಎಂಬಾತನನ್ನು ಉತ್ತರ ಪ್ರದೇಶ ಉಗ್ರ ನಿಗ್ರಹ ದಳ ಬಂಧಿಸಿತ್ತು. ಹ್ಯಾರೀಸ್ ಅಲಿ ಐಸಿಸ್ ಉಗ್ರ ಸಂಘಟನೆ ಜತೆ ಸಂಪರ್ಕದಲ್ಲಿದ್ದ. ಈ ಸುಳಿವಿನ ಮೇಲೆ ಆತನನ್ನು ಬಂಧಿಸಲಾಗಿತ್ತು. ವಿದೇಶಿ ಹ್ಯಾಂಡ್ಲರ್ಗಳು ಹಾಗೂ ಕರ್ನಾಟಕದ ಯುವಕನೊಬ್ಬನ ಜತೆ ಸಂಪರ್ಕ ಇರುವುದು ತನಿಖೆಯಲ್ಲಿ ಗೊತ್ತಾಗಿತ್ತು. ತನಿಖೆ ಮುಂದುವರಿಸಿದಾಗ ಹ್ಯಾರೀಶ್ ಅಲಿ ಜತೆ ಭದ್ರಾವತಿಯ ಮೊಹಮದ್ ಗೌಸ್ ನಂಟು ಪತ್ತೆಯಾಗಿದೆ. ಹ್ಯಾರೀಸ್ ಜತೆ ಗೌಸ್ ಆನ್ಲೈನ್ ಸಂಪರ್ಕದಲ್ಲಿದ್ದ. ಕೇಂದ್ರ ಗುಪ್ತಚರ ಅಧಿಕಾರಿಗಳು ನೀಡಿದ ಸುಳಿವಿನ ಮೇಲೆ ಮೊಹಮದ್ ಗೌಸ್ನನ್ನು ಭದ್ರವಾತಿ ಓಲ್ಡ್ ಟೌನ್ ಪೊಲೀಸರು ಆಗಸ್ಟ್ನಲ್ಲಿ ಬಂಧಿಸಿದ್ದರು.
ಶಂಕಿತ ಉಗ್ರ ಮೊಹಮದ್ ಗೌಸ್ ಮೊಬೈಲ್ ಪರಿಶೀಲನೆ ನಡೆಸಿದಾಗ ಉಗ್ರರ ಜತೆಗೆ ಸಂಪರ್ಕ ಹೊಂದಿರುವ ಸಾಕ್ಷ್ಯ ಸಿಕ್ಕಿದೆ. ಐಸಿಸ್ ಪೋಸ್ಟರ್ಗಳು, ವಿದೇಶಿ ಹ್ಯಾಂಡ್ಲರ್ಗಳ ಆಡಿಯೋ ರೆಕಾರ್ಡಿಂಗ್ಗಳು, ಐಇಡಿ ಬಾಂಬ್ ತಯಾರಿಕೆಗೆ ಸಂಬಂಧಿಸಿದ ವಿಡಿಯೋಗಳು ಪತ್ತೆಯಾಗಿವೆ. ಮೊರಾದಾಬಾದ್ನಲ್ಲಿ ಸೆರೆಸಿಕ್ಕ ವೈದ್ಯಕೀಯ ವಿದ್ಯಾರ್ಥಿ ಹ್ಯಾರೀಶ್ ಅಲಿ ಜತೆ ಮಾತನಾಡಿರುವ ಚಾಟ್ಗಳೂ ಸಿಕ್ಕಿವೆ ಎಂದು ಹೇಳಲಾಗಿದೆ.
ಐಸಿಸ್ ಜತೆ ಸಂಪರ್ಕ ಹೊಂದಿ ದೇಶದಲ್ಲಿ ಭಯೋತ್ಪಾದಕ ಕೃತ್ಯವೆಸಗಲು ಪಿತೂರಿ ನಡೆಸಿರುವುದಕ್ಕೆ ಸಾಕ್ಷ್ಯ ಸಿಕ್ಕಿದೆ. ಭಾರತದ ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಬೆದರಿಕೆ ಉಂಟಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ದೊಡ್ಡ ಪಿತೂರಿ ಬಯಲು ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಕೇಂದ್ರ ಸರ್ಕಾರ, ಎನ್ಐಎ ಕಾಯ್ದೆ 2008ರ ಸೆಕ್ಷನ್ 6(5) ಮತ್ತು ಸೆಕ್ಷನ್ 8ರ ಅನ್ವಯ ಹೆಚ್ಚಿನ ತನಿಖೆ ನಡೆಸುವಂತೆ ಎನ್ಐಎಗೆ ಪ್ರಕರಣ ವರ್ಗಾಯಿಸಿದೆ.
·ಧರ್ಮದ ಹೆಸರಲ್ಲಿ ಜಿಹಾದಿ ಸಂದೇಶ ಹರಿಬಿಟ್ಟು ಯುವಕರ ಮೈಂಡ್ ವಾಶ್
·ಅವರ ಮನಃಪರಿವರ್ತನೆ ಮಾಡಿ ಉಗ್ರವಾದಿ ಸಂಘಟನೆಗೆ ಸದಸ್ಯರನ್ನಾಗಿಸುವುದು
·ಆರ್ಥಿಕ ಆಮಿಷವೊಡ್ಡುವುದು
·ಅನ್ಯ ಧರ್ಮದ 20 ರಿಂದ 30 ವರ್ಷ ವಯಸ್ಸಿನ ಯುವಕರೇ ಹೆಚ್ಚು ಟಾರ್ಗೆಟ್
ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ಟ್ರಯಲ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಂಕಿತ ಉಗ್ರ, ಇಸ್ಲಾಮಿಕ್ ಸ್ಟೇಟ್ (ಐಎಸ್)ನ ಹುಜೈರ್ ಫರ್ಹಾನ್ ಬೇಗ್ ಅಲಿಯಾಸ್ ಹುಜೈರ್ ಸಿಕ್ಕಿಬಿದ್ದಿದ್ದ. ಎನ್ಐಎ ವಿಶೇಷ ನ್ಯಾಯಾಲಯ 2025ರ ಸೆಪ್ಟೆಂಬರ್ನಲ್ಲಿ 6 ವರ್ಷ ಕಠಿಣ ಶಿಕ್ಷೆ ಹಾಗೂ 58 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತ್ತು. ಆ ಪ್ರಕರಣದಲ್ಲಿ ಶಂಕಿತ ಉಗ್ರನಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಆರ್ಥಿಕ ನೆರವು ಸಿಕ್ಕಿತ್ತು.