DK Shivakumar 
ರಾಜ್ಯ

ನಾಯಕತ್ವ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟಿದ್ದು, ಗೊಂದಲವೇ ಇಲ್ಲ: ಖರ್ಗೆ ಸಾಹೇಬರನ್ನೇ ಕೇಳಿ ಎಂದ DK Shivakumar

ವಿಧಾನಸೌಧ (ಬೆಂಗಳೂರು): ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಾಯಕತ್ವ ಬದಲಾವಣೆ ಹಾಗೂ ಅಧಿಕಾರ ಹಂಚಿಕೆ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಗುರುವಾರ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಈ ಬಗ್ಗೆ ನೀವೇನಿದ್ದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಕೇಳಿ" ಎಂದು ಹೇಳುವ ಮೂಲಕ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡರು. "ನಾಯಕತ್ವ ಬದಲಾವಣೆಯ ವಿಷಯದಲ್ಲಿ ನಾನು ಯಾವುದೇ ವೈಯಕ್ತಿಕ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವೆಲ್ಲರೂ ಬದ್ಧ" ಎಂದು ಸ್ಪಷ್ಟಪಡಿಸಿದರು.

ಮಳೆ ಹಾನಿ ತಡೆಗೆ ಮುನ್ನೆಚ್ಚರಿಕೆ: ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಸೂಚನೆ

ಇದೇ ವೇಳೆ ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಕಾಂಪೌಂಡ್ ಕುಸಿತದ ದುರ್ಘಟನೆಯ ಬಗ್ಗೆ ಮಾತನಾಡಿದ ಡಿಸಿಎಂ, ಇಡೀ ನಗರದಾದ್ಯಂತ ಅಪಾಯಕಾರಿ ಕಾಂಪೌಂಡ್ ಗಳ ಪಕ್ಕದಲ್ಲಿರುವ ಬೀದಿ ಬದಿ ವ್ಯಾಪಾರಿಗಳನ್ನು ತಕ್ಷಣವೇ ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಈಗಾಗಲೇ ಅಂತಹ ಅಪಾಯಕಾರಿ ಪ್ರದೇಶಗಳನ್ನು ಗುರುತಿಸುವ ಕೆಲಸ ಆರಂಭವಾಗಿದೆ.
ವಾಜಪೇಯಿ (ಬೌರಿಂಗ್) ಆಸ್ಪತ್ರೆಯ ಕಾಂಪೌಂಡ್ ಕುಸಿತದ ಬಗ್ಗೆ ಪ್ರಸ್ತಾಪಿಸಿದ ಅವರು, "ಕಾಂಪೌಂಡ್ ಪಕ್ಕದಲ್ಲಿ ಮಣ್ಣಿನ ರಾಶಿ ಹಾಕಿದ್ದರಿಂದ ಉಂಟಾದ ಒತ್ತಡಕ್ಕೆ ಗೋಡೆ ಕುಸಿದಿದೆ. ಇನ್ನು ಮುಂದೆ ಇಂತಹ ಜಾಗಗಳಲ್ಲಿ ವ್ಯಾಪಾರಿಗಳನ್ನು ಕೂರಿಸಬಾರದು ಎಂದು ತಿಳಿಸಿದ್ದೇನೆ" ಎಂದರು. ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಎಲ್ಲಾ ರಸ್ತೆಗಳಲ್ಲಿರುವ ದುರ್ಬಲ ಮರಗಳು ಮತ್ತು ಕೊಂಬೆಗಳನ್ನು ಕತ್ತರಿಸಲು ಬಿಬಿಎಂಪಿ ಮತ್ತು ಪೊಲೀಸರು ಪಟ್ಟಿ ಸಿದ್ಧಪಡಿಸಿದ್ದು, ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಮಳೆಗಾಗಿ ದೇವರಲ್ಲಿ ಪ್ರಾರ್ಥನೆ

ಈ ವರ್ಷ ಹವಾಮಾನ ಇಲಾಖೆ ಮಳೆ ಕಡಿಮೆ ಎಂದು ಮುನ್ಸೂಚನೆ ನೀಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಶಿವಕುಮಾರ್, "ಮಳೆ ಕಡಿಮೆಯಾದರೆ ಆಣೆಕಟ್ಟುಗಳಲ್ಲಿ ನೀರು ಕಡಿಮೆಯಾಗಿ ವಿದ್ಯುತ್ ಉತ್ಪಾದನೆಯ ಮೇಲೆ ಹೊಡೆತ ಬೀಳಲಿದೆ. ಕಾವೇರಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ 177 ಟಿಎಂಸಿ ನೀರು ಹರಿಸಲೇಬೇಕು. ಈ ಎಲ್ಲಾ ಕಾರಣಗಳಿಗಾಗಿ ಮಳೆ ಚೆನ್ನಾಗಿ ಬರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದರು. ನಾಡಿದ್ದು ಅವರು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಲಿದ್ದು, ಅಲ್ಲಿನ ಗೇಟ್ ಬದಲಿ ಕಾರ್ಯದ ನಂತರ ನೀರು ಶೇಖರಣೆಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.