ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು
ಬೆಂಗಳೂರು: ವಕೀಲ ವೃತ್ತಿಯಲ್ಲಿ ತಕ್ಷಣಕ್ಕೆ ಯಶಸ್ಸು ಸಿಗದಿದ್ದರೂ ಸತತ ಪರಿಶ್ರಮದಿಂದ ಮುನ್ನಡೆಯಬೇಕು. ತಳಮಟ್ಟದ ಜನರಿಗೆ ನ್ಯಾಯ ಸಿಗುವಂತೆ ಮಾಡಲು ಕಾನೂನು ಪದವೀಧರರು ಶ್ರಮಿಸಬೇಕು ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಸಲಹೆ ನೀಡಿದ್ದಾರೆ.
ಜಯನಗರದ 4ನೇ ಹಂತದಲ್ಲಿ ಶನಿವಾರ ಆಯೋಜಿಸಿದ್ದ ‘ಎಂಕೆಪಿಎಂ ಆರ್‌ವಿ ಕಾನೂನು ಅಧ್ಯಯನ ಸಂಸ್ಥೆಯ’ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪ್ರಾಮಾಣಿಕತೆ, ವಿನಮ್ರತೆ ಮತ್ತು ನೈತಿಕತೆಯನ್ನು ಸದಾ ಎತ್ತಿಹಿಡಿಯುವಂತಾಗಬೇಕು. ಸತ್ಯದ ಪರವಾಗಿ ಸದಾ ನಿಲ್ಲುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಕಾನೂನು ಕಾಲೇಜುಗಳು, ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಜಿಜ್ಞಾಸೆ ಬೆಳೆಸಿ ಸಮಾಜ ಸೇವೆಗೆ ಸಿದ್ಧಗೊಳಿಸಲಿವೆ. ನಮ್ಮಲ್ಲಿರುವ ಜ್ಞಾನವು ಉದ್ಯೋಗ ತಂದುಕೊಡಬಹುದು. ಆದರೆ, ಸಮಾಜದಲ್ಲಿ ನಂಬಿಕೆ ಗಳಿಸಲು ಉತ್ತಮ ಚಾರಿತ್ರ್ಯವೇ ಮುಖ್ಯ. ತಂತ್ರಜ್ಞಾನವನ್ನು ಕೇವಲ ನ್ಯಾಯದ ಪ್ರಗತಿಗೆ ಬಳಸಬೇಕೇ ಹೊರತು, ಅದು ಮಾನವನ ಬುದ್ಧಿವಂತಿಕೆ ಮತ್ತು ನೈತಿಕ ವಿವೇಚನೆಗೆ ಪರ್ಯಾಯ ಆಗಬಾರದು ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಪಿ.ಶ್ಯಾಮ್ ಮಾತನಾಡಿ, ಪದವಿ ಎಂಬುದು ಕೇವಲ ಕಾಗದದ ಪ್ರಮಾಣಪತ್ರವಲ್ಲ. ಅದು ವಿದ್ಯಾರ್ಥಿಗಳ ವರ್ಷಗಳ ಕಠಿಣ ಪರಿಶ್ರಮ ಮತ್ತು ಬೌದ್ಧಿಕ ಶ್ರಮದ ಸಂಕೇತ. ವಿದ್ಯಾರ್ಥಿಗಳು ತಮ್ಮ ಸಾಧನೆಯ ಹಿಂದೆ ಇರುವ ಪಾಲಕರ ತ್ಯಾಗವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಜೀವನದುದ್ದಕ್ಕೂ ಹೊಸ ವಿಷಯಗಳನ್ನು ಕಲಿಯುವ ಹಂಬಲ ಹೊಂದಿರಬೇಕು. ವೃತ್ತಿಜೀವನದಲ್ಲಿ ಸಹಾನುಭೂತಿ ಹಾಗೂ ನೈತಿಕತೆ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನೂರಾರು ಕಾನೂನು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ಆರ್‌ಎಸ್‌ಎಸ್‌ಟಿ ಉಪಾಧ್ಯಕ್ಷ ಎ.ಸಿ. ಚಂದ್ರಶೇಖರ್ ರಾಜು, ಎಂಕೆಪಿಎಂ ಆರ್‌ವಿಐಎಲ್‌ಎಸ್‌ನ ಆಡಳಿತ ಮಂಡಳಿ ಅಧ್ಯಕ್ಷರು ಎನ್.ಆರ್. ನಂದೀಶ್, ಟ್ರಸ್ಟಿಗಳಾದ ಸಿಎ ಡಾ. ಎ.ಎಸ್. ವಿಷ್ಣು ಭರತ್,ಡಾ.ಎಂ.ಎಸ್. ಪ್ರಕಾಶ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಆರ್. ಅಂಜಿನಾ ರೆಡ್ಡಿ ಮತ್ತಿತರರಿದ್ದರು.