High court 
ರಾಜ್ಯ

ಕಾನೂನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಇರಲಿ| High court

ಪ್ರಮುಖ ಮುಖ್ಯಾಂಶಗಳು

  • ಶಾಸಕಾಂಗಕ್ಕೆ ಹೈಕೋರ್ಟ್​ ಸಲಹೆ
  • ಉದಾಹರಣೆ ನೀಡಿ ವಿವರಿಸುವ ಅಗತ್ಯವಿದೆ ಎಂದು ಅವಲೋಕನ
ಬೆಂಗಳೂರು: ಕಾನೂನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು. ಆದ್ದರಿಂದ, ನಿಯಮಗಳನ್ನು ವಿವರಿಸುವಾಗ ಉದಾಹರಣೆಗಳನ್ನು ನೀಡುವ ಪರಿಪಾಠವನ್ನು ಮತ್ತೆ ಆರಂಭಿಸುವ ಅಗತ್ಯವಿದೆ ಎಂದು ಶಾಸಕಾಂಗಕ್ಕೆ ಹೈಕೋರ್ಟ್​ ಸಲಹೆ ನೀಡಿದೆ.
ಕಾನೂನು ತಿದ್ದುಪಡಿಗಳ ಸಂದರ್ಭದಲ್ಲಿ ಶಾಸಕಾಂಗವು ಬಳಸುವ ಭಾಷೆ ಮತ್ತು ಸ್ಪಷ್ಟತೆಯ ಕೊರತೆಯು ನ್ಯಾಯಾಲಯಗಳಲ್ಲಿ ಅನಗತ್ಯ ವ್ಯಾಜ್ಯಗಳಿಗೆ ಕಾರಣವಾಗುತ್ತಿದೆ. ಕಾಯ್ದೆಗಳಿಗೆ ತಿದ್ದುಪಡಿ ತಂದಾಗ ಅದು ಭವಿಷ್ಯದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆಯೇ ಅಥವಾ ಹಿಂದಿನ ಪ್ರಕರಣಗಳಿಗೂ ಪೂರ್ವಾನ್ವಯವಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಇದನ್ನು ಸರಿಪಡಿಸಬೇಕಾದ ಅಗತ್ಯವಿದೆ ಎಂದು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ), ಇಂಡಿಯನ್​ ಕಾಂಟ್ರಾಕ್ಸ್​ ಆ್ಯಕ್ಟ್​ನಂತಹ ಹಳೇ ಕಾಯ್ದೆಗಳಲ್ಲಿ ಇರುವಂತೆ, ಪ್ರತಿಯೊಂದು ವಿಧಿಗೂ ಉದಾಹರಣೆಗಳನ್ನು ಸೇರಿಸುವ ಪದ್ಧತಿಯನ್ನು ಮರಳಿ ತರಬೇಕು. ಇದು ಕಾಯ್ದೆಯ ಉದ್ದೇಶವನ್ನು ಜನಸಾಮಾನ್ಯರಿಗೂ ಅರ್ಥಮಾಡಿಸಲು ಸಹಾಯ ಮಾಡುತ್ತದೆ. ಕಾನೂನುಗಳು ತಜ್ಞರಿಗೆ ಮಾತ್ರ ಅರ್ಥವಾಗುವ ಒಗಟುಗಳಾಗಿರಬಾರದು. ಆದ್ದರಿಂದ ಅತ್ಯಂತ ಸರಳ ಮತ್ತು ಸ್ಪಷ್ಟ ಭಾಷೆಯಲ್ಲಿ ಕಾಯ್ದೆಗಳನ್ನು ವ್ಯಾಖ್ಯಾನಿಸುವುದು ಅಗತ್ಯ ಎಂದು ನ್ಯಾಯಪೀಠ ಹೇಳಿದೆ.

ವ್ಯವಸ್ಥೆಯ ಸರಳೀಕರಣ:

ನ್ಯಾಯಾಲಯವು ಶಾಸಕಾಂಗದ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಬದಲಾಗಿ ನ್ಯಾಯಾಲಯಗಳಲ್ಲಿನ ಅನಗತ್ಯ ವ್ಯಾಜ್ಯಗಳನ್ನು ಕಡಿಮೆ ಮಾಡಲು ಮತ್ತು ನ್ಯಾಯ ವಿತರಣಾ ವ್ಯವಸ್ಥೆಯನ್ನು ಸರಳೀಕರಿಸಲು ಈ ಸಲಹೆಗಳನ್ನು ನೀಡುತ್ತಿರುವುದಾಗಿ ನ್ಯಾಯಪೀಠ ಸ್ಪಷ್ಟಪಡಿಸಿದೆ. ಶಾಸಕಾಂಗವು ಕಾನೂನು ಅನ್ವಯದ ವ್ಯಾಪ್ತಿಯ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದರೆ, ನ್ಯಾಯಾಂಗದ ಮೇಲಿನ ಹೊರೆ ಕಡಿಮೆಯಾಗಿ, ದಾವೆದಾರರಿಗೆ ತ್ವರಿತ ನ್ಯಾಯ ಸಿಗಲು ಸಹಕಾರಿಯಾಗಲಿದೆ ಎಂದು ಅವಲೋಕನ ಮಾಡಿದೆ.

ತೆರಿಗೆ ವಸೂಲಿಗೆ ಮೊದಲ ಆದ್ಯತೆ 

ಬಿಪಿಎಲ್​ ಇಂಜಿನಿಯರಿಂಗ್​ ಲಿಮಿಟೆಡ್​ ಕಂಪನಿಯು 1997 ಮತ್ತು 1998ರಲ್ಲಿ ವಿವಿಧ ಬ್ಯಾಂಕ್​ಗಳಿಂದ ಸಾಲ ಪಡೆದು ತನ್ನ ಆಸ್ತಿಗಳನ್ನು ಅಡಮಾನ ಇಟ್ಟಿತ್ತು. ಸುಮಾರು 70 ಕೋಟಿ ರೂ. ಗೂ ಅಧಿಕ ವಾಣಿಜ್ಯ ತೆರಿಗೆ ಬಾಕಿ ಬಗ್ಗೆ ಅಂದಿನ ಆಂಧ್ರಪ್ರದೇಶ ಸರ್ಕಾರ 2007 ಮತ್ತು 2011ರಲ್ಲಿ ನೋಟಿಸ್​ ನೀಡಿ, ಕಂಪನಿಯ ಆಸ್ತಿಗಳನ್ನು ಜಪ್ತಿ ಮಾಡಿತ್ತು. ಈ ಕಂಪನಿಯು 2012ರಲ್ಲಿ ದಿವಾಳಿ ಎಂದು ಘೋಷಿಸಲ್ಪಟ್ಟಿತ್ತು. ಇದಾದ ನಂತರ ಸಾಲದಾತರಾಗಿದ್ದ ಓಂಕಾರ ಅಸೆಟ್ಸ್​ ರೀಕನ್​ಸ್ಟ್ರಕ್ಷನ್​ ಕಂಪನಿಯು ಸರ್ಕಾರ ಜಪ್ತಿ ಮಾಡಿರುವ ಆಸ್ತಿಯಲ್ಲಿ ತಮಗೂ ಪಾಲಿದೆ ಎಂದು ವಾದಿಸಿತ್ತು. ಇಂದಿನ ತೆಲಂಗಾಣ ವಾಣಿಜ್ಯ ತೆರಿಗೆ ಇಲಾಖೆಯ ವ್ಯಾಪ್ತಿಗೆ ಬರುವ ಜಪ್ತಿ ಆದೇಶವನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್​ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ ತೀರ್ಪು ನೀಡುವ ವೇಳೆ ಕಾನೂನು ಸುಧಾರಣೆ ಬಗ್ಗೆ ಹೈಕೋರ್ಟ್​ ಅವಲೋಕನ ಮಾಡಿದೆ. ಸಾಲದಾತರ ಹಕ್ಕುಗಳಿಗಿಂತ ತೆರಿಗೆ ವಸೂಲಿ ಮಾಡುವ ಸರ್ಕಾರದ ಹಕ್ಕಿಗೆ ಮೊದಲ ಆದ್ಯತೆ ಇರುತ್ತದೆ ಎಂದು ಸ್ಪಷ್ಟಪಡಿಸಿದೆ.