ಚನ್ನರಾಯಪಟ್ಟಣ ತಾಲೂಕು ವಕೀಲರ ಸಂಘದಲ್ಲಿ ನೂತನವಾಗಿ ನವೀಕರಣಗೊಂಡ ಮೇಲಂತಸ್ತಿನ ಕಟ್ಟಡವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಡಿ.ಕೆ.ಹರೀಶ್, ಪಿ. ದಿನೇಶ್, ಸಿ.ಬಿ.ಹೇಮಂತ್ ಕುಮಾರ್, ಸುಶ್ಮಿತಾ,ಕೆ.ಎಲ್. ಚೇತನ್ ಸೇರಿದಂತೆ ಇತರರು ಇದ್ದರು.
ಚನ್ನರಾಯಪಟ್ಟಣ: ಕಾನೂನು ಪದವಿ ಪಡೆದ ನಂತರ ವಕೀಲರು ವೃತ್ತಿಪರತೆ ಮೈಗೂಡಿಸಿಕೊಳ್ಳಬೇಕು. ಸಮಾಜ ನಿರೀಕ್ಷಿಸುವ ಜವಾಬ್ದಾರಿಯುತ ವಕೀಲರಾಗಿ ಹೊರಹೊಮ್ಮಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸಲಹೆ ನೀಡಿದರು.
ತಾಲೂಕು ವಕೀಲರ ಸಂಘದ ಕಟ್ಟಡದ ಮೇಲಂತಸ್ತಿನಲ್ಲಿ ತಮ್ಮ ವೈಯಕ್ತಿನ ನೆರವಿನಿಂದ ನವೀಕೃತಗೊಂಡಿರುವ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ವಕೀಲರು ವೃತ್ತಿ ಗೌರವ ಕಾಪಾಡಿಕೊಳ್ಳಬೇಕು. ವೃತ್ತಿಯನ್ನು ವ್ಯವಹಾರಕ್ಕೆ ಬಳಸದೆ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಕಾನೂನು ವಿದ್ಯಾರ್ಥಿಗಳು ಮುಖ್ಯವಾಗಿ ಅಧ್ಯಯನಶೀಲರಾಗಬೇಕು. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಹಲವು ಸುಧಾರಣೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಪಟ್ಟಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿಗೆ ಹೆಚ್ಚುವರಿಯಾಗಿ 3 ಕೋಟಿ ರೂ. ಅನುದಾನದ ಭರವಸೆ ನೀಡಿದ್ದು, ಭರದಿಂದ ಕಾಮಗಾರಿ ನಡೆಯುತ್ತಿದೆ. ವಕೀಲರ ಸಂಘದ ಒಳಾಂಗಣ ಕಾಮಗಾರಿಗಳಿಗೆ ವೈಯಕ್ತಿಕವಾಗಿ 2.5 ಲಕ್ಷ ರೂ. ನೀಡಿದ್ದು, ಈ ಹಣದಲ್ಲಿ ಹೊಸ ವಿನ್ಯಾಸದಲ್ಲಿ ನಿರ್ಮಾಣಗೊಂಡಿದೆ. ಪಟ್ಟಣದಲ್ಲಿ 7 ನ್ಯಾಯಾಲಯಗಳಿದ್ದು, ವಕೀಲರ ಸಂಖ್ಯೆ 170 ಇದೆ. ಅವರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ. 2.5 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಾಣಗೊಂಡಿದ್ದು, ಮುಂಬರುವ ದಿನಗಳಲ್ಲಿ ಲಿಫ್ಟ್ ವ್ಯವಸ್ಥೆಯನ್ನೂ ಮಾಡುಲು ಕ್ರಮ ಕೈಗೊಳ್ಳಲಾಗುವುದು. ಇನ್ನೆರಡು ತಿಂಗಳಲ್ಲಿ ನ್ಯಾಯಾಲಯ ಸಂಕೀರ್ಣದ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ವಕೀಲರ ಸಂಘದ ಕಟ್ಟಡಕ್ಕೆ ವೈಯಕ್ತಿಕವಾಗಿ ನೆರವು ನೀಡಿದ ಶಾಸಕರನ್ನು ಇದೇ ವೇಳೆ ಸಂಘದಿಂದ ಗೌರವಿಸಲಾಯಿತು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಕೆ.ಹರೀಶ್, ಉಪಾಧ್ಯಕ್ಷ ಪಿ.ದಿನೇಶ್, ಕಾರ್ಯದರ್ಶಿ ಸಿ.ಬಿ.ಹೇಮಂತ್ ಕುಮಾರ್,ಜಂಟಿ ಕಾರ್ಯದರ್ಶಿ ಸುಶ್ಮಿತಾ, ಖಜಾಂಚಿ ಚೇತನ್ ಕೆ ಎಲ್, ವಕೀಲರಾದ ದೇವರಾಜ್ ಕುಮಾರ್, ಬೋರೇಗೌಡ, ಬಸವರಾಜು ಇತರರು ಇದ್ದರು.