Lavanya's funeral in Bennangoor
ಚಿಂತಾಮಣಿ: ಬೆಸ್ಕಾಂ ಜಾಗೃತ ದಳದ ಪೊಲೀಸ್ ಅಧೀಕ್ಷಕರಾಗಿದ್ದ 2012ರ ಬ್ಯಾಚ್ನ ಐಪಿಎಸ್ ಅಧಿಕಾರಿ ಬಿ.ಎನ್‘.ಲಾವಣ್ಯ (39) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಕೋಲಾರ ತಾಲೂಕಿನ ಶ್ರೀನಿವಾಸಪುರ ರಸ್ತೆ ಬೆಣ್ಣಂಗೂರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆಯಿತು.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಗ್ರಾಮದ ಬ್ಲಾಕ್ ಡೆವಲಪ್ಮೆಂಟ್ ನಿವೃತ್ತ ಅಧಿಕಾರಿ ಜಿ.ಎಚ್. ನಾರಾಯಣಸ್ವಾಮಿ ಅವರ ಪುತ್ರಿ ರತ್ನಮಂಜುಳಾರನ್ನು ಬೆಣ್ಣಂಗೂರು ಗ್ರಾಮದ ನಾರಾಯಣಪ್ಪ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಯ ಪುತ್ರಿ ಲಾವಣ್ಯ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ತಾಯಿಯ ತವರೂರಾದ ದೊಡ್ಡಗಂಜೂರಿಗೆ ಆಗಾಗ ಬಂದು ಹೋಗುತ್ತಿದ್ದರು. ಅವರ ಅಗಲಿಕೆಗೆ ದೊಡ್ಡಗಂಜೂರಿನ ಅವರ ಸಂಬಂಧಿಕರು, ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.
ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ: ಬೆಳ್ಳಂಗೂರು ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗೌರವ ಸಲ್ಲಿಸಲಾಯಿತು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಲಾವಣ್ಯ ಪತಿ ಡಾ. ಪುರುಷೋತ್ತಮ್ ಸೇರಿದಂತೆ ಅವರ ಕುಟುಂಬ ವರ್ಗದವರು ಭಾಗವಹಿಸಿದ್ದರು.