- ಬಾಲ್ಕಿ ಸಹಕಾರಿ ಸಂಘದ ಮೇಲೆ ಸಿಐಡಿ ದಾಳಿ
- ಶೇ.60-40 ಲೆಕ್ಕದಲ್ಲಿ ಹಣ ಹಂಚಿಕೆ ಮಾಡಿಕೊಳ್ಳುತ್ತಿದ್ದರು
- ಆಯ್ಕೆ ಪ್ರಕ್ರಿಯೇ ಮುಕ್ತಾಯದ ಬಳಿಕ ಜ್ಞಾನೇಂದ್ರ ಮೋಜು ಮಸ್ತಿ
- ಪಾರ್ಟಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಿಡಿಯೊ ಲಭ್ಯ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದಲ್ಲಿ ಪರೀಕ್ಷಾ ನೇಮಕಾತಿ ಹಗರಣದ ಪ್ರಮುಖ ಪಾತ್ರ ವಹಿಸಿದ್ದ ಬಸವರಾಜ್ ಕನ್ನಾಳೆ ಖಾತೆಗಳಲ್ಲಿ ಕೋಟ್ಯಂತರ ರೂ. ವರ್ಗಾವಣೆಯಾಗಿರುವುದನ್ನು ಪತ್ತೆ ಮಾಡಿರುವ ಸಿಐಡಿ ಅಧಿಕಾರಿಗಳು, ಬೀದರ್ ಜಿಲ್ಲೆ ಬಾಲ್ಕಿಯಲ್ಲಿನ ಸಹಕಾರ ಸಂಘದ ಬ್ಯಾಂಕ್ ಮೇಲೆ ಬುಧವಾರ ದಾಳಿ ನಡೆಸಿದ್ದರು.
ಸರ್ಕಾರಿ ಹುದ್ದೆ ಕೊಡಿಸುವುದಾಗಿ ಮತ್ತು ಪ್ರಶ್ನೆ ಪತ್ರಿಕೆ ಲೀಕ್ ಮಾಡಿರುವ ಅಭ್ಯರ್ಥಿಗಳಿಂದ ಪಡೆದಿದ್ದ ಲಕ್ಷಾಂತರ ರೂ. ಹಣ ಸಹಕಾರ ಬ್ಯಾಂಕ್ ಮೂಲಕ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಅಲ್ಲದೇ ಅದೇ ಸಹಕಾರ ಬ್ಯಾಂಕ್ ಖಾತೆ ಹೊಂದಿರುವ ಅವರ ಸಂಬಂಧಿಕರು, ಸ್ನೇಹಿತರಿಂದ ಹಣ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಬ್ಲ್ಯಾಕ್ ಮನಿ ವೈಟ್ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಬೀದರ್ ಮತ್ತು ಬಾಲ್ಕಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಾಳ ಬ್ಯಾಂಕ್ ಖಾತೆಗಳನ್ನು ಹೊಂದಿರುವುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಸಿಐಡಿ ಡಿವೈಎಸ್‌ಪಿ ಅಧಿಕಾರಿಗಳ ತಂಡ ಬಾಲ್ಕಿ ಸಹಕಾರ ಬ್ಯಾಂಕ್ ಮೇಲೆ ದಾಳಿ ನಡೆಸಿ ಕನ್ನಾಳೆ ಹಾಗೂ ಅವರ ಸಂಬಂಧಿಕರ ನಾಲ್ಕೈದು ಖಾತೆ ಪರಿಶೀಲನೆ ನಡೆಸಿದ್ದರು. ಆರೋಪಿ ಖಾತೆಗೆ ವಾರ್ಷಿಕ ಕೋಟ್ಯಂತರ ರೂ. ಬಾಲ್ಕಿ ಸಹಕಾರ ಸಂಘದ ಬ್ಯಾಂಕ್‌ನಿಂದ ವರ್ಗಾವಣೆಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
60*40 ಹಣ ಹಂಚಿಕೆ:
ನೇಮಕಾತಿ ಪರೀಕ್ಷೆ ವೇಳೆ ನಡೆದ ಅಕ್ರಮದಿಂದ ಬಂದ ಹಣವನ್ನು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಬಸವರಾಜ್ ಕನ್ನಾಳೆ 60*40 ಲೆಕ್ಕದಲ್ಲಿ ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ. ಪಶುವೈದ್ಯಾಧಿಕಾರಿಗಳ ಹುದ್ದೆ ಸೇರಿ ವಿವಿಧ ಇಲಾಖೆಗಳ ನೇಮಕಾತಿ ವೇಳೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳನ್ನು ಗುರುತಿಸಿ ಅವರಿಂದ ಪಡೆದಿರುವ ಹಣದಲ್ಲಿ ಶೇ. 60ರಷ್ಟು ಕನ್ನಾಳೆ ಜೇಬಿಗೆ ಉಳಿದ ಶೆ.40 ರಷ್ಟು ಹಣ ಜ್ಞಾನೇಂದ್ರಗೆ ತಲುಪಿಸುತ್ತಿದ್ದನು.
ಎರಡು ಕಂತಿನಲ್ಲಿ ಅಭ್ಯರ್ಥಿಗಳಿಂದ ಪಡೆದ ಹಣವನ್ನು ಗೌಪ್ಯವಾಗಿ ಹಾಗೂ ಯಾರಿಗೂ ತಿಳಿಯದಂತೆ ಜ್ಞಾನೇಂದ್ರ ಮತ್ತು ಅವರ ಸಂಬಂಧಿಕರಿಗೆ ತಲುಪುತ್ತಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿರುವ ಸಿಐಡಿ ಇಬ್ಬರು ಆರೋಪಿಗಳು ಹೊಂದಿರುವ ವಿವಿಧ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸಿಐಡಿ ಅಧಿಕಾರಿಗಳು ವಿವಿಧ ಆಯಾಮದಲ್ಲಿ ತನಿಖೆ ಕೈಗೊಂಡಿರುವ ಬೆನ್ನಲ್ಲೇ ಪರೀಕ್ಷಾರ್ಥಿಗಳ ವಿಚಾರಣೆ ವೇಳೆ ಡಿಗ್ರಿಯಲ್ಲಿ ಐದು ವಿಷಯಗಳಲ್ಲಿ ಅನುತ್ತಿರ್ಣನಾಗಿದ್ದ ಅಭ್ಯರ್ಥಿಯೊಬ್ಬ 40 ಲಕ್ಷ ರೂ. ನೀಡಿ ಪರೀಕ್ಷೆಯಲ್ಲಿ ಟಾಪರ್ ಆಗಿರುವುದು ತನಿಖೆ ವೇಳೆ ಅಘಾತಕಾರಿ ಅಂಶ ಹೊರಬಿದ್ದಿದೆ. ಸಿಐಡಿ ಅಧಿಕಾರಿಗಳು 329 ಅಭ್ಯರ್ಥಿಗಳಿಗೆ ನೀಡಿರುವ ನೋಟಿಸ್ ಮೇರೆಗೆ ಹಾಜರಾಗುತ್ತಿದ್ದ ಅಭ್ಯರ್ಥಿ ಮಹಮದ್ ಸುಹೇಲ್ ಬಂಡೇಗೋಳ್ ಡಿಗ್ರಿಯಲ್ಲಿ ಹಲವು ವಿಷಯಗಳಲ್ಲಿ ಫೇಲ್ ಆಗಿರುವ ಅಭ್ಯರ್ಥಿಯಾಗಿದ್ದಾನೆ. ಆರೋಪಿ ಕನ್ನಾಳೆ ಈತನಿಂದ 40 ಲಕ್ಷ ರೂಪಾಯಿಗೆ ಸರ್ಕಾರಿ ಹುದ್ದೆ ಕೊಡಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದ. ಮುಂಗಡವಾಗಿ 20 ಲಕ್ಷ ರೂ. ನೀಡಿರುವುದು ಸಿಐಡಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಡೀಲ್‌ನಲ್ಲಿ ಮಧ್ಯವರ್ತಿಯೊಬ್ಬರ ಪಾತ್ರ ಇದ್ದು ಆತನ ಬೆಲೆಗೆ ಸಿಐಡಿ ತಂಡ ಬಲೆ ಬಿಸಿದೆ ಎನ್ನಲಾಗಿದೆ.
ಐಎಎಸ್ ಅಧಿಕಾರಿ ಪಾರ್ಟಿ,
ಮೋಜು ಮಸ್ತಿ ವಿಡಿಯೊ ಲಭ್ಯ!
ಕಳೆದ ಮೂರು ದಿನಗಳಿಂದ ಸಿಐಡಿ ಕಸ್ಟಡಿಯಲ್ಲಿರುವ ಜ್ಞಾನೇಂದ್ರ, ಪರೀಕ್ಷೆಗೂ ಮುನ್ನವೇ ಕೈಯಿಂದಲೇ ಪ್ರಶ್ನೆ ಬರೆದು ಕನ್ನಾಳ್‌ಗೆ ತಲುಪಿಸುತ್ತಿದ್ದನು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ಒಎಂಆರ್ ಶೀಟ್‌ನ್ನು ಯಾರಿಗೆ ಎಷ್ಟು ಅಂಕ ನೀಡಬೇಕು, ಟ್ಾ ಲಿಸ್ಟ್‌ನಲ್ಲಿ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಜ್ಞಾನೇಂದ್ರನೇ ಲೆಕ್ಕಹಾಕುತ್ತಿದ್ದ. ಪರೀಕ್ಷೆ ಹಾಗೂ ಅಭ್ಯರ್ಥಿಗಳಿಗೆ ಸರ್ಕಾರಿ ನೌಕರಿ ಆದೇಶ ತಲುಪಿದ ಬಳಿಕ ಆಯ್ಕೆಗೊಂಡ ಅಭ್ಯರ್ಥಿಗಳ ಜನ್ಮದಿನದಂದು ಪಾರ್ಟಿ, ಡ್ಯಾನ್ಸ್ ಮೋಜು ಮಸ್ತಿ ಮಾಡಿರುವ ವಿಡಿಯೊಗಳು ಸಿಐಡಿ ಪತ್ತೆ ಮಾಡಿದೆ ಎಂದು ತಿಳಿದು ಬಂದಿದೆ.
ಸ್ಥಳ ಮಹಜರು:
ಆರೋಪಿ ಜ್ಞಾನೇಂದ್ರ ಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ಕೆಪಿಎಸ್‌ಸಿ ಕಚೇರಿ ಸ್ಥಳ ಮಹಜರು ನಡೆಸಿದರು. ಬುಧವಾರ ಸಂಜೆ ಆಯೋಗ ಕಚೇರಿ, ಒಎಂಆರ್ ಶೀಟ್ ಸಂಗ್ರಹಿಸಿಟ್ಟಿದ್ದ ಭದ್ರತಾ ಕೊಠಡಿ, ಸಿಸಿ ಕ್ಯಾಮರಾ ುಟೇಜ್ ಡಿಲಿಟ್ ಆಗಿರುವ ತಾಂತ್ರಿಕ ಕೊಠಡಿ ಸೇರಿ ಇತರೆ ಸ್ಥಳ ಮಹಜರು ನಡೆಸಿದರು.
ಆರೋಪಿ ಬಸವರಾಜ ಕನ್ನಾಳೆ ಭಾಲ್ಕಿಯಲ್ಲಿ ಇತ್ತೀಚೆಗೆ 15 ಎಕರೆ ಜಮೀನು ಖರೀದಿಸಿರುವುದು ಪತ್ತೆಯಾಗಿದೆ. ಅವರ ತಂದೆಯ ಜನ್ಮದಿನಕ್ಕೆ ಕಾರೊಂದನ್ನು ಗಿಫ್ಟ್ ಕೊಟ್ಟಿರುವುದು, ವಾಣಿಜ್ಯ ಸಂಕೀರ್ಣ ಖರೀದಿಸಿರುವುದು ಪತ್ತೆಯಾಗಿದೆ. ಅಲ್ಲದೇ ಕೆಲವು ತಿಂಗಳಿಂದ ಕನ್ನಾಳೆ ವಿದೇಶ ಪ್ರವಾಸಕ್ಕೂ ಹೆಚ್ಚು ಹೋಗಿಬಂದಿರುವುದೂ ತನಿಖೆಯಿಂದ ಬಯಲಾಗಿದೆ.