ಮಗುನಗುವಿನ ಕಲಾವಿದ
ಮಗುವಿನಂಥ ನಗು ಮುಖ, ವಿಭಿನ್ನ ಹಾವಭಾವ, ನಗೆಗಡಲಲ್ಲಿ ತೇಲಿಸುವ ಸಂಭಾಷಣೆಯ ಮೂಲಕ ಪ್ರಸಿದ್ಧರಾಗಿದ್ದವರು ಹಿರಿಯ ಹಾಸ್ಯ ಕಲಾವಿದ ಎಂ.ಎಸ್.ಉಮೇಶ್. 1960ರಲ್ಲಿ ತೆರೆಕಂಡಿದ್ದ "ಮಕ್ಕಳ ರಾಜ್ಯ' ಮೂಲಕ ಬಣ್ಣದ ಬದುಕು ಆರಂಭಿಸಿದ್ದ ಅವರು ಬಾಲ ನಟನಾಗಿ, ರಂಗಭೂಮಿ ಕಲಾವಿದನಾಗಿ, ಹಾಸ್ಯ ನಟನಾಗಿ ಸುದೀರ್ ಸೇವೆ ಸಲ್ಲಿಸಿದವರು. ಇತ್ತೀಚೆಗೆ ತೆರೆಕಂಡಿದ್ದ "ಕಮಲ್ ಶ್ರೀದೇವಿ'ಯಲ್ಲೂ ನಟನೆಯ ಛಾಪು ಮೂಡಿಸಿದ್ದರು. ಇಂತಹ ಅಪರೂಪದ ಕಲಾವಿದನ ಐದು ದಶಕಗಳ ಸಿನಿ ಬದುಕಿನಲ್ಲಿ ಹಲವು ಬಾರಿ ಏಳು&ಬೀಳು ಕಂಡರೂ ಅದನ್ನು ಬಹಿರಂಗಪಡಿಸದೆ ಕನ್ನಡ ಪ್ರೇಕ್ಷಕರನ್ನು ನಗಿಸುತ್ತಲೇ ತನ್ನೊಳಗೆ ನೋವುಂಡವರು.
ಹಿರಿಯ ಹಾಸ್ಯ ನಟ ಉಮೇಶ್ ಅಸ್ತಂಗತ
ಲಿವರ್ (ಯಕೃತ್) ಕ್ಯಾನ್ಸರ್ನಿಂದ ಬಳಲುತ್ತಿದ್ದ ಹಿರಿಯ ಹಾಸ್ಯ ನಟ ಎಂ.ಎಸ್. ಉಮೇಶ್ (80) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಕಳೆದ ಅ. 10ರಂದು ಮನೆಯಲ್ಲಿ ಸ್ನಾನಕ್ಕೆ ತೆರಳುವಾಗ ಆಕಸ್ಮಿಕವಾಗಿ ಜಾರಿ ಬಿದ್ದಿದ್ದ ಉಮೇಶ್ ಅವರಿಗೆ ಬಲವಾಗಿ ಪೆಟ್ಟಾಗಿತ್ತು. ಅವರನ್ನು ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆಗೆ ಮುಂದಾದಾಗ ಲಿವರ್ನಲ್ಲಿ ಗಡ್ಡೆ ಪತ್ತೆಯಾಗಿತ್ತು. ಇದು ಲಿವರ್ ಕ್ಯಾನ್ಸರ್ ಎಂದು ವೈದ್ಯರು ಖಚಿತಪಡಿಸಿದ್ದರು. ಬಳಿಕ ಅವರನ್ನು ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ 8 ಗಂಟೆಗೆ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಓರ್ವ ಪುತ್ರಿ ಇದ್ದಾರೆ. ಪಾರ್ಥಿವ ಶರೀರವನ್ನು ಬೆಳಗ್ಗೆ ಅವರ ಜೆಪಿ ನಗರದ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಬಳಿಕ ರವೀಂದ್ರ ಕಲಾಕ್ಷೇತ್ರಕ್ಕೆ ಕರೆತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ಡಿಂಗ್ರಿ ನಾಗರಾಜ್, ನಟಿ ಶ್ರುತಿ, ಗಿರಿಜಾ ಲೋಕೇಶ್ ಮತ್ತು ಅನೇಕ ಸ್ಯಾಂಡಲ್ವುಡ್ ಕಲಾವಿದರು ಅಂತಿಮ ದರ್ಶನ ಪಡೆದರು. ಸಂಜೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ನಾಲ್ಕನೇ ವಯಸ್ಸಿಗೆ ಬಣ್ಣ ಹಚ್ಚಿದ್ದ ಪ್ರತಿಭೆ
ಉಮೇಶ್ 1945ರ ಏ. 24ರಂದು ಮೈಸೂರಿನಲ್ಲಿ ಜನಿಸಿದ್ದರು. ಅವರ ತಂದೆ ಶ್ರೀಕಂಠಯ್ಯ ಕೂಡ ಕೆ. ಹಿರಣ್ಣಯ್ಯ ಮಿತ್ರ ನಾಟಕ ಮಂಡಳಿಯಲ್ಲಿ ಕಲಾವಿದರಾಗಿದ್ದರು. ತಂದೆಯ ನೆರವಿನಿಂದ ಉಮೇಶ್ ತಮ್ಮ 4ನೇ ವಯಸ್ಸಿನಲ್ಲಿಯೇ ಹಿರಣ್ಣಯ್ಯ ಅವರ ನಾಟಕದಲ್ಲಿ ಬಣ್ಣ ಹಚ್ಚಿ ಮಿಂಚಿದ್ದರು. ಬಳಿಕ ಗುಬ್ಬಿ ವೀರಣ್ಣ ನಾಟಕ ಕಂಪನಿ ಸೇರಿಕೊಂಡ ಅವರು ಕೆಲ ನಾಟಕಗಳಲ್ಲಿ ಬಾಲ ಕಲಾವಿದನಾಗಿ ಅಭಿನಯಿಸಿದರು. ನಂತರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಉಮೇಶ್ ಪ್ರತಿಭೆ ಗುರುತಿಸಿ, ಖ್ಯಾತ ನಿರ್ದೇಶಕ ಬಿ.ಆರ್. ಪಂತುಲು ಗಮನಕ್ಕೆ ತಂದು ಅವರ "ಮಕ್ಕಳ ರಾಜ್ಯ' (1960) ಸಿನಿಮಾದಲ್ಲಿ ಅವಕಾಶ ಕೊಡಿಸಿದರು. ಆ ಮೂಲಕ ಉಮೇಶ್ ಕನ್ನಡ ಚಿತ್ರರಂಗಕ್ಕೆ ಪರಿಚಯವಾದರು.
ಎರಡನೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿ
"ಮಕ್ಕಳ ರಾಜ್ಯ' ಚಿತ್ರದಲ್ಲಿ ಉಮೇಶ್ ನಟನೆ ನೋಡಿ ಮೆಚ್ಚಿಕೊಂಡಿದ್ದ ಪುಟ್ಟಣ್ಣ ಕಣಗಾಲ್ ತಮ್ಮ ನಿರ್ದೇಶನದ "ಕಥಾ ಸಂಗಮ'ಚಿತ್ರಕ್ಕೆ ಅವಕಾಶ ನೀಡಿದರು. "ಕಥಾ ಸಂಗಮ' ನಾಲ್ಕು ಕಥೆಗಳ ಸಿನಿಮಾ. ಅದರಲ್ಲಿ "ಮುನಿತಾಯಿ' ಕಥೆಯಲ್ಲಿ ಉಮೇಶ್ ತಿಮ್ಮರಾಯ ಪಾತ್ರ ನಿರ್ವಹಿಸಿದ್ದರು. ಇದರಲ್ಲಿ ರಜನಿಕಾಂತ್ ಕೂಡ ಇದ್ದರು. ಇದು ಉಮೇಶ್ ನಟಿಸಿದ್ದ ಎರಡನೇ ಸಿನಿಮಾ. ಇದರಲ್ಲಿನ ನಟನೆಗೆ ಅವರು ಅತ್ಯುತ್ತಮ ಪೋಷಕ ನಟ ರಾಜ್ಯಪ್ರಶಸ್ತಿ ಪಡೆದಿದ್ದರು.
ಗೋಲ್ಮಾಲ್ "ಸೀತಾಪತಿ'ಯ ಕಿತಾಪತಿ
ಅನಂತ್ನಾಗ್ ಅಭಿನಯದ "ಗೋಲ್ಮಾಲ್' ಸರಣಿಯಲ್ಲಿ ಉಮೇಶ್ ಅವರ ಸೀತಾಪತಿ ಪಾತ್ರ ಇಂದಿಗೂ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆ ಚಿತ್ರದಲ್ಲಿ "ನೀವೇನೋ ಬೇಜಾರ್ ಮಾಡಿಕೊಂಡಿಲ್ಲ ತಾನೇ? "ಅಯ್ಯಯ್ಯೋ ಅಪಾರ್ಥ ಮಾಡಿಕೊಂಡು ಬಿಟ್ರಾ?', "ಅಪಾರ್ಥ ಮಾಡ್ಕೋಬೇಡಿ' ಎಂಬ ಡೈಲಾಗ್ಗಳು ಇಂದಿಗೂ ಹೆಚ್ಚು ಪ್ರಸಿದ್ಧವಾಗಿವೆ. 2 ತಿಂಗಳ ಹಿಂದೆ "ಕಮಲ್ ಶ್ರೀದೇವಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲೂ ಈ ಡೈಲಾಗ್ ಹೇಳಿ ಉಮೇಶ್ ನೆರೆದಿದ್ದವರನ್ನು ರಂಜಿಸಿದ್ದರು.
300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ
ಉಮೇಶ್ ಐದೂವರೆ ದಶಕಗಳ ಸಿನಿ ವೃತ್ತಿಯಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯ, ಪೋಷಕ ಹೀಗೆ ಚಿತ್ರದಿಂದ ಚಿತ್ರಕ್ಕೆ ಭಿನ್ನ&ವಿಭಿನ್ನ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು. "ನಾಗರಹೊಳೆ'(1977), "ಭಾಗ್ಯವಂತರು' (1977), "ಪುಟಾಣಿ ಏಜೆಂಟ್ 123' (1979), "ಅಂತ' (1981), "ಗುರು ಶಿಷ್ಯರು' (1981),"ಹಾಲು ಜೇನು' (1982) "ಎರಡು ನಕ್ಷತ್ರಗಳು' (1983), "ಭಕ್ತ ಪ್ರಹ್ಲಾದ' (1983), "ಗೋಲ್ಮಾಲ್ ರಾಧಾಕೃಷ್ಣ' (1990), "ತರ್ಲೆ ನನ್ಮಗ' (1992), "ಆಕಸ್ಮಿಕ' (1993), "ಹಗಲು ವೇಷ' (2000), "ಜಾಕಿ' (2010), "ಡೇರ್ ಡೇವಿಲ್ ಮುಸ್ತಾಫಾ' (2023) ಸೇರಿ 350ಕ್ಕೂ ಅಧಿಕ ಚಿತ್ರಗಳಲ್ಲಿ ಅವರು ನಟಿಸಿದ್ದರು. ರಮೇಶ್ ಅರವಿಂದ ನಟನೆಯ "ವೆಂಕಟ ಇನ್ ಸಂಕಟ' ಚಿತ್ರದಲ್ಲಿ ಉಮೇಶ್ ಅವರ "ಗುಂಡಮ್ಮ' ಎಂಬ ಹಳೆಯ ಕಾಲದ ಅಜ್ಜಿ ಪಾತ್ರ ಮೆಚ್ಚುಗೆ ಪಡೆದಿತ್ತು.
ಎಂಬತ್ತರಲ್ಲೂ ಉತ್ಸಾಹಿ
ಉಮೇಶ್ ತಮ್ಮ ಅಂತಿಮ ದಿನಗಳಲ್ಲೂ ಕಲಾವಿದನಾಗಿಯೇ ಜೀವನ ಸವೆಸಿದ್ದರು. ಅವರ 80ನೇ ವಯಸ್ಸಿನಲ್ಲಿ, ಇತ್ತೀಚೆಗೆ ತೆರೆ ಕಂಡಿದ್ದ ಸಚಿನ್ ಚಲುವರಾಯಸ್ವಾಮಿ ನಟಿಸಿದ್ದ "ಕಮಲ್ ಶ್ರೀದೇವಿ' ಚಿತ್ರದಲ್ಲಿ ಎಟಿಎಂ ಸೆಕ್ಯೂರಿಟಿ ಗಾರ್ಡ್ ಪಾತ್ರ ನಿರ್ವಹಿಸಿದ್ದರು. ಅವರು ನಟಿಸಿದ ಇನ್ನೂ ಕೆಲವು ಚಿತ್ರಗಳು ಬಿಡುಗಡೆ ಬಾಕಿಯಿವೆ.
ದಿಗ್ಗಜರ ಜತೆ ನಟನೆ
ಉಮೇಶ್ 50 ವರ್ಷಗಳ ಸಿನಿ ಬದುಕಿನಲ್ಲಿ ಕನ್ನಡದ ದಿಗ್ಗಜ ಕಲಾವಿದರ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್, ಅನಂತ್ ನಾಗ್, ಲೋಕೇಶ್ ಅವರ ಸಿನಿಮಾಗಳಲ್ಲಿ ನಟಿಸುವ ಜತೆಗೆ ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು. ಇನ್ನೂ ವಿಶೇಷವೆಂದರೆ ಉಮೇಶ್ ಡಾ.ರಾಜಕುಮಾರ್ ಕುಟುಂಬದ 3 ತಲೆಮಾರುಗಳ ಜತೆ ಕೆಲಸ ಮಾಡಿದ್ದಾರೆ. ರಾಜಕುಮಾರ್, ಪುತ್ರರಾದ ಶಿವರಾಜ ಕುಮಾರ್, ಪುನೀತ್ರಾಜಕುಮಾರ್ ಸಿನಿಮಾ ಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಅವರ ಕುಟುಂಬದ 3ನೇ ತಲೆಮಾರಿನ ನಟ ವಿನಯ್ ರಾಜಕುಮಾರ್ ಚೊಚ್ಚಲ ಸಿನಿಮಾ "ಸಿದ್ದಾರ್ಥ್' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.
15 ವರ್ಷಗಳ ಹಿಂದೆ ನನಗೋಸ್ಕರ ಉಮೇಶ್ ಸರ್ ಕಾರಿನ ಕಥೆ ಬರೆದಿದ್ದರು. ದುಡ್ಡು ತೆಗೆದುಕೊಳ್ಳದೆ ನನಗೆ ಆ ಕಥೆ ನೀಡಿದ್ದರು. ಉಮೇಶಣ್ಣ ಇದ್ದರೆ ಸೆಟ್ನಲ್ಲಿ ಯಾವಾಗಲೂ ನಗು ಇರುತ್ತಿತ್ತು. ಕಲೆಯಿಂದ, ಕಲೆಗಾಗಿಯೇ ಅವರು ಬದುಕಿದ್ದರು.
ಉಮೇಶ್ ರಂಗಭೂಮಿ, ಚಿತ್ರರಂಗದಲ್ಲಿ ದೀರ್ ಕಾಲ ಸೇವೆ ಸಲ್ಲಿಸಿದವರು ಎಂಬುದು ಹೆಮ್ಮೆಯ ಸಂಗತಿ. ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾಗ ನನ್ನನ್ನು ಭೇಟಿ ಮಾಡಿದ್ದರು. ಆಗ ನಾನು ಚಿಕಿತ್ಸೆಗೆ ನೆರವಾಗಿದ್ದೆ. ಕುಟುಂಬಕ್ಕೆ ದು@ಖ ಭರಿಸುವ ಶಕ್ತಿ ಸಿಗಲಿ.
> ಸಿದ್ದರಾಮಯ್ಯ ಮುಖ್ಯಮಂತ್ರಿ
ಉಮೇಶ್ ನನಗೆ ವೈಯಕ್ತಿಕವಾಗಿ ಹೆಚ್ಚು ಪರಿಚಯವಿಲ್ಲ. ಆದರೆ ಕಲಾವಿದರಾಗಿ ಅವರ ಅಭಿನಯವನ್ನು ಆನಂದಿಸಿದ್ದೇನೆ. ಅವರ ಅಗಲಿಕೆ ಬೇಸರ ತಂದಿದೆ. ಚಿತ್ರರಂಗಕ್ಕೆ ನಷ್ಟವಾಗಿದೆ.
> ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ
ಉಮೇಶ್ ಅಂಕಲ್ ನನ್ನ ತಂದೆಯ ಬಾಲ್ಯ ಸ್ನೇಹಿತರಾಗಿದ್ದರು. ಇಬ್ಬರೂ ಒಟ್ಟಿಗೇ ಗುಬ್ಬಿ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಅಂದಿನಿಂದ ಆರಂಭವಾದ ಕುಟುಂಬದ ಜತೆಗಿನ ಒಡನಾಟ, ಸ್ನೇಹ ಇಂದಿಗೆ ಕೊನೆ ಆಯಿತು ಅನಿಸುತ್ತದೆ. ಕಲಾವಿದರಿಗೆ ಸಾವಿಲ್ಲ. ಸಿನಿಮಾ ಹಾಗೂ ವ್ಯಕ್ತಿತ್ವದ ಮೂಲಕ ಅವರು ಅಜರಾಮರ. > ಶ್ರುತಿ ನಟಿ
ತಮ್ಮ ಹಾಸ್ಯಮಯ ಪಾತ್ರಗಳಿಂದ ಜನಪ್ರಿಯರಾಗಿದ್ದ ಉಮೇಶ್ ನಿಧನದಿಂದ ಚಿತ್ರರಂಗ ಹಿರಿಯ ಕಲಾವಿದನನ್ನು ಕಳೆದುಕೊಂಡಿದೆ. ವಿಶಿಷ್ಟ ಅಭಿನಯ ಮತ್ತು ಸಂಭಾಷಣಾ ಶೈಲಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು.
> ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಉಮೇಶ್ ನಿಧನ ಸುದ್ದಿ ತಿಳಿದು ದು@ಖಿತನಾಗಿದ್ದೇನೆ. ಹಾಸ್ಯಭರಿತ ನಟನೆ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು. ಅವರ ಕಾಯ ಅಳಿದರೂ ನಟನೆ ಕನ್ನಡಿಗರ ಜನಮಾನಸದಲ್ಲಿ ಸದಾ ಜೀವಂತವಾಗಿರುತ್ತದೆ.
> ಆರ್. ಅಶೋಕ ವಿಧಾನಸಭೆ ಪ್ರತಿಪಕ್ಷ ನಾಯಕ