ವಿಧಾನಸೌಧ 
ರಾಜ್ಯ

ಆರ್‌ಐ, ವಿಎ ಕೈಗೆ ಬಂತು ಲ್ಯಾಪ್‌ಟಾಪ್

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಆಧಾರ್ ಸಂಖ್ಯೆ ಬಳಸಿಕೊಂಡು ಭೂಮಿ, ಮೋಜಿನಿ, ಎಜೆಎಸ್‌ಕೆ ತಂತ್ರಾಂಶಗಳ ಏಕೀಕರಣದ ಮೂಲಕ ಕಂದಾಯ ಇಲಾಖೆಯ ಸೇವೆಗಳನ್ನು ಒದಗಿಸುವ ಸಲುವಾಗಿ ರಾಜಸ್ವ ನಿರೀಕ್ಷಕರಿಗೆ (ಆರ್‌ಐ) ಲ್ಯಾಪ್‌ಟಾಪ್ ನೀಡಲಾಗಿದೆ. ಈ ಮೂಲಕ ಡಿಜಿಟಲ್ ಸೇವೆ ಒದಗಿಸಲು ಕಂದಾಯ ಇಲಾಖೆ ಮುಂದಾಗಿದೆ.
ಕಂದಾಯ ಇಲಾಖೆಯ ಎಲ್ಲ ಸೇವೆಗಳನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ಡಿಜಿಟಲ್ ವೇದಿಕೆ ಮೂಲಕ ರೈತರಿಗೆ, ಸಾರ್ವಜನಿಕರಿಗೆ ಒದಗಿಸಲು ಕ್ರಮ ವಹಿಸಲಾಗುವುದು. ಇ-ಆಫೀಸ್ ವ್ಯವಸ್ಥೆಯನ್ನು ಗ್ರಾಮ ಮಟ್ಟದವರೆಗೆ ವಿಸ್ತರಿಸಲು ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಕಂದಾಯ ನಿರೀಕ್ಷಕರಿಗೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ (ವಿಎ) ಲ್ಯಾಪ್‌ಟ್ಯಾಪ್ ನೀಡಲಾಗಿದೆ. 2024-25ನೇ ಸಾಲಿನ ಬಜೆಟ್‌ನಲ್ಲಿ ೋಷಣೆ ಮಾಡಿದಂತೆ ಡಿಜಿ ಕಂದಾಯ ಯೋಜನೆಯಡಿ ಲ್ಯಾಪ್‌ಟಾಪ್ ನೀಡಲಾಗುತ್ತಿದೆ.
ಈಗಾಗಲೇ ಕಂದಾಯ ಇಲಾಖೆಯಲ್ಲಿ ಜಾರಿಗೆ ತಂದಿರುವ ಭೂಮಿ ತಂತ್ರಾಂಶದಲ್ಲಿ ಸ್ವಯಂಚಾಲಿತ ಮ್ಯುಟೇಶನ್ ಸೇವೆಗೆ ಅನುಕೂಲವಾಗಲಿದೆ. ನೋಟಿಸ್ ಅವಧಿ ಮುಕ್ತಾಯವಾಗುತ್ತಿದಂತೆ ಮಾನವ ಹಸ್ತಕ್ಷೇಪ ಇಲ್ಲದೆ ಸರ್ವರ್ ಸಹಿ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆ ಸಿಗಲಿದೆ. ನೋಟಿಸ್ ಅವಧಿಯಲ್ಲಿ ಕಂದಾಯ ನಿರೀಕ್ಷಕರ ಅಥವಾ ಸಾರ್ವಜನಿಕರ ಕಡೆಯಿಂದ ತಕರಾರು ಅರ್ಜಿ ಬಂದರೆ ಮ್ಯುಟೇಶನ್ ಪೂರ್ಣಗೊಳಿಸದೆ ಆರ್‌ಸಿಸಿಎಂಎಸ್ ತಂತ್ರಾಂಶದ ತಹಸೀಲ್ದಾರ್ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ಮ್ಯುಟೇಶನ್‌ಗೆ ತಕರಾರು ಅರ್ಜಿಗಳ ಬಗ್ಗೆ ಮಾಹಿತಿ ಪಡೆದು ಅಪ್‌ಡೇಟ್ ಮಾಡಬಹುದು.
ಇದಲ್ಲದೆ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ ಸೇರಿ ಕಂದಾಯ ಇಲಾಖೆಯ ಎಲ್ಲ ಸೇವೆಗಳ ಅರ್ಜಿಗಳನ್ನು ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಇದ್ದಲ್ಲಿಯೆ ಲ್ಯಾಪ್‌ಟಾಪ್ ಬಳಸಿಕೊಂಡು ಡಿಜಿಟಲ್ ಸಹಿ ಮೂಲಕ ವಿಲೇವಾರಿ ಮಾಡಬಹುದು. ಕಚೇರಿಗೆ ಬಂದೇ ಮಾಡಬೇಕು ಎಂಬ ನೆಪವನ್ನು ಇನ್ನು ಮುಂದೆ ಮಾಡುವಂತಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲ್ಯಾಪ್‌ಟಾಪ್ ಬಳಕೆಗೆ ಷರತ್ತುಗಳು
-ಲ್ಯಾಪ್‌ಟಾಪ್ ಉದ್ದೇಶಿತ ಕಾರ್ಯಕ್ಕೆ ಮಾತ್ರ ಬಳಸಬೇಕು, ಅನ್ಯ ಕಾರ್ಯಕ್ಕೆ ಬಳಸಿದರೆ ಕ್ರಮ
-ಒಂದು ಹೋಬಳಿಯಲ್ಲಿ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಮಾತ್ರ ಲ್ಯಾಪ್‌ಟಾಪ್
-ಹೆಚ್ಚುವರಿ ಹೋಬಳಿಯಲ್ಲಿ ಕರ್ತವ್ಯ ನಿರ್ವಹಿಸಿದರೂ ಒಂದೇ ಲ್ಯಾಪ್‌ಟಾಪ್
-ವರ್ಗಾವಣೆಯಾದ ತಾಲೂಕಿನಲ್ಲಿದ್ದ ಲ್ಯಾಪ್‌ಟಾಪ್ ಪಡೆಯಬೇಕು
-ಸಹಾಯಕ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಇದ್ದವರಿಗೆ ಕೊಡುವುದಿಲ್ಲ
-ಮುಂಬಡ್ತಿ, ನಿವೃತ್ತಿಯಾದರೆ, ದೀರ್ಘಾವಧಿ ರಜೆ ಹೋದರೇ ತಹಸೀಲ್ದಾರ್‌ಗೆ ಒಪ್ಪಿಸಬೇಕು