ಜಿಲ್ಲಾಧಿಕಾರಿ ಜಿ.ಜಗದೀಶ 
ರಾಜ್ಯ

80.90 ಕೋಟಿ ರೂ.ಮೌಲ್ಯದ ಜಾಗ ಸರ್ಕಾರಿ ವಶಕ್ಕೆ-Land

ಬೆಂಗಳೂರು: ರಾಜಧಾನಿಯಲ್ಲಿ ಒತ್ತುವರಿಯಾಗಿರುವ ಅಂದಾಜು 80.90 ಕೋಟಿ ರೂ.ಮೌಲ್ಯದ ಒಟ್ಟು 16 ಎಕರೆ 23 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ನೇತೃತ್ವದಲ್ಲಿ ತೆರವುಗೊಳಿಸಿ ಶನಿವಾರ ವಶಕ್ಕೆ ಪಡೆಯಲಾಯಿತು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸ್ಮಶಾನ, ಗುಂಡುತೋಪು, ಒಳಚರಂಡಿ, ರಾಜಕಾಲುವೆ, ಗೋಮಾಳ,ಕೆರೆ ಮತ್ತುಗೋಮಾಳ ಸೇರಿ ಇತರ ಸರ್ಕಾರಿ ಜಾಗಗಳನ್ನು ತೆರವುಗೊಳಿಸಲಾಯಿತು.
ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ರಾಂಪುರ ಗ್ರಾಮದ ಸರ್ವೇ ಸಂಖ್ಯೆ 103ರಲ್ಲಿ 1.50 ಕೋಟಿ ರೂ.ಮೌಲ್ಯದ ಸ್ಮಶಾನ ಜಾಗ, ಹಿರಂಡಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 11ರಲ್ಲಿ 50 ಲಕ್ಷ ರೂ.ಮೌಲ್ಯದ ಗುಂಡುತೋಪು, ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ಮರಸೂರು ಗ್ರಾಮದ ಸರ್ವೇ ಸಂಖ್ಯೆ 499ರಲ್ಲಿ 1 ಕೋಟಿ ರೂ.ಮೌಲ್ಯದ ಡ್ರೈನೆಜ್ ಜಾಗವನ್ನು ತೆರವುಗೊಳಿಸಲಾಯಿತು.
ಅತ್ತಿಬೆಲೆ ಹೋಬಳಿಯ ಇಂಡಬೆಲೆ ಗ್ರಾಮದ ಸರ್ವೇ ಸಂಖ್ಯೆ 131ರಲ್ಲಿ 30 ಗುಂಟೆ, ಯಡವನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 164ರಲ್ಲಿ 6 ಗುಂಟೆ, ಜಿಗಣಿ ಹೋಬಳಿಯ ಕೊಪ್ಪ ಗ್ರಾಮದ ಸರ್ವೇ ಸಂಖ್ಯೆ 110ರಲ್ಲಿ 7 ಎಕರೆ 21 ಗುಂಟೆ, ಸರ್ಜಾಪುರ ಹೋಬಳಿಯ ದೊಮ್ಮಸಂದ್ರದ ತಿಗಳಚೌಡೇನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 214/1ಎ 84/2ರಲ್ಲಿ 10 ಗುಂಟೆ, ಅಡಿಗಾರಕಲ್ಲಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 65ರಲ್ಲಿ 20 ಗುಂಟೆ ಜಾಗವನ್ನು ವಶಪಡಿಸಿಕೊಳ್ಳಲಾಯಿತು.
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ದೊಡ್ಡಮಾರನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 21ರಲ್ಲಿ 14 ಗುಂಟೆ ಗೋಮಾಳ ಜಾಗ, ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಬೆಟ್ಟಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 31ರಲ್ಲಿ 5 ಎಕರೆ 10 ಗುಂಟೆ,ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಬಿಳಿಜಾಜಿ ಗ್ರಾಮದ ಸರ್ವೇ ಸಂಖ್ಯೆ 26, 23, 22 ಮತ್ತು 3 ರಲ್ಲಿ 15 ಗುಂಟೆ ತೆರವುಗೊಳಿಸಲಾಯಿತು. ಒತ್ತುವರಿ ಕಾರ್ಯಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ್, ತಹಶೀಲ್ದಾರ್‌ಗಳು ಮತ್ತಿತರರಿದ್ದರು.