ಜಂಟಿ ಕಾರ್ಯಾಚರಣೆ  
ರಾಜ್ಯ

ಕೋಟ್ಯಂತರ ಮೌಲ್ಯದ ಜಾಗ ವಶ / NELAMANGAL

ಬೆಂಗಳೂರು ಗ್ರಾಮಾಂತರ ಡೆಸ್ಕ್
ನೆಲಮಂಗಲ : ದಶಕಗಳಿಂದಲೂ ಖಾಸಗಿ ವಶದಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಜಮೀನನ್ನು ನ್ಯಾಯಾಲಯದ ಆದೇಶದ ಮೇರೆಗೆ ಶಾಲಾ ಶಿಕ್ಷಣ ಇಲಾಖೆ ವಶಕ್ಕೆ ಪಡೆದುಕೊಂಡಿತು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪಕ್ಕದ ಜಮೀನಿಗೆ ಗುರುವಾರ ಬೆಳಗ್ಗೆ ಜೆಸಿಬಿ ಇಳಿಸಿದ ತಾಲೂಕು ಶಾಲಾ ಶಿಕ್ಷಣ ಇಲಾಖೆ ಸೇರಿ ನಗರಸಭೆ ಅಧಿಕಾರಿಗಳು, ಪೊಲೀಸರ ಸಹಕಾರ ಪಡೆದು ಜಂಟಿ ಕಾರ್ಯಾಚರಣೆ ನಡೆಸಿ, ಜಮೀನನ್ನು ಸ್ವಚ್ಛಗೊಳಿಸಿ ಸುತ್ತಮುತ್ತ ಮುಳ್ಳುತಂತಿಯಿಂದ ತಡೆಗೋಡೆ ನಿರ್ಮಿಸಿ, ಜಾಗವನ್ನು ಶಿಕ್ಷಣ ಇಲಾಖೆ ಸುಪರ್ದಿಗೆ ಪಡೆದುಕೊಂಡರು.
ಘಟನೆ ಹಿನ್ನೆಲೆ : ನಗರದ ಸ.ನಂ.146/2ಎ1ರಲ್ಲಿ 1.32 ಗುಂಟೆ, ಸ.ನಂ 146/3 ರಲ್ಲಿ 23 ಗುಂಟೆ ಸೇರಿ ಒಟ್ಟು 2 ಎಕರೆ 15 ಗುಂಟೆ ಜಮೀನು ನಗರದ ಸರ್ಕಾರಿ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿತ್ತು. ಆದರೆ, ಬೆಳ್ಳೂರಮ್ಮ ಮತ್ತವರ ಕುಟುಂಬದವರು 2012ರಲ್ಲಿ ಸದರಿ ಜಮೀನನ್ನು ಕುಟುಂಬಕ್ಕೆ ಸೇರಬೇಕು ಎಂದು ಹೈಕೋರ್ಟ್​ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರರಾದ ಬೆಳ್ಳೂರಮ್ಮ ಇತರರು ಜಾಗಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆ ಒದಗಿಸದ ಕಾರಣ2012ರ ಜುಲೈ 9ರಂದು ಶಿಕ್ಷಣ ಇಲಾಖೆ ಪರವಾಗಿ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಬೆಳ್ಳೂರಮ್ಮ ಹಾಗೂ ಕುಟುಂಬದವರು 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮತ್ತೆ ದಾವೆ ಹೂಡಿದ್ದರು. ಸುದೀರ್ಘ ವಿಚಾರಣೆ ಬಳಿಕ ಘನ ನ್ಯಾಯಾಲಯ, 2026ರ ಫೆ.13ರಂದು ಅರ್ಜಿದಾರರ ದಾವೆ ವಜಾಗೊಳಿಸಿದ್ದರ ಜತೆಗೆ 1 ಲಕ್ಷ ರೂ.ದಂಡ ವಿಧಿಸಿದ್ದು, ಈ ಹಿನ್ನೆಲೆಯಲ್ಲಿ ಅತಿಕ್ರಮಣ ಮಾಡಿಕೊಂಡಿದ್ದ ಕುಟುಂಬದವರಿಗೆ ನ್ಯಾಯಾಲಯದ ಆದೇಶದ ಬಗ್ಗೆ ತಿಳಿವಳಿಕೆ ನೋಟಿಸ್​ ನೀಡಿದ ಬಳಿಕ ಪೊಲೀಸ್​ ಇಲಾಖೆ ಸಹಕಾರ ಪಡೆದು ಇಲಾಖೆ ಜಾಗ ವಶಕ್ಕೆ ಪಡೆದುಕೊಂಡಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜಿನಪ್ಪ ಮಾಹಿತಿ ನೀಡಿದರು.
ತೆರವು ಕಾರ್ಯಾಚರಣೆ ಕೌತುಕ : ಬೆಳ್ಳಂಬೆಳಗ್ಗೆ ನಗರದ ಬಿಇಒ ಕಚೇರಿ ಪಕ್ಕದ ವಿವಾದಿತ ಸ್ಥಳದಲ್ಲಿ ಪೊಲೀಸ್​ ಬಂದೋಬಸ್ತ್​ನಲ್ಲಿ ಜೆಸಿಬಿ ಇಳಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ ಶಾಕ್​ ಕೂತೂಹಲಕ್ಕೆ ಎಡೆಮಾಡಿತು. ಕಾರ್ಯಾಚರಣೆ ವೇಳೆ ಸಶಸ್ತ್ರ ಮೀಸಲು ಪಡೆಯ ಪೊಲೀಸ್​ ಸಿಬ್ಬಂದಿ, ಶಿಕ್ಷಣ ಇಲಾಖೆ ಅಧಿಕಾರಿ, ಸಿಬ್ಬಂದಿ ಜತೆಗೆ ಶಿಕ್ಷಕರ ಸಂಘಟನೆಗಳು ಸ್ಥಳದಲ್ಲಿ ಜಮಾಯಿಸಿದ್ದರಿಂದ, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿಮಾರ್ಣವಾಗಿತ್ತು.
ಕೋಟ್ಯಂತರ ಮೌಲ್ಯದ ಸರ್ಕಾರಿ ಸ್ವತ್ತು : ಸದರಿ ಜಮೀನು ನಗರದ ಮುಖ್ಯ ರಸ್ತೆಯಲ್ಲಿದ್ದು, ಕೋಟ್ಯಂತರ ರೂ. ಬೆಲೆಬಾಳಲಿದೆ.ಇದೀಗ ಶಾಲಾ ಶಿಕ್ಷಣ ಇಲಾಖೆ ವಶ ಪಡಿಸಿಕೊಂಡಿದ್ದು, ಸರ್ಕಾರಿ ಶಾಲೆಯ ಉಪಯೋಗಕ್ಕೆ ಬರಲಿದೆ.