ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಭೂ ದಾಖಲೆಗಳನ್ನು ಪಡೆಯಲು ಜನರು ಕಂದಾಯ ಕಚೇರಿಗೆ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ದೃಢೀಕೃತ ದಾಖಲೆ ಪಡೆಯಬಹುದು ಅಥವಾ ಅಟಲ್ ಜೀ ಕೇಂದ್ರಗಳಲ್ಲಿ ಸ್ವೀಕರಿಸಬಹುದಾದ ಜನಸ್ನೇಹಿ ಯೋಜನೆಯನ್ನು ಕಂದಾಯ ಇಲಾಖೆ ಜಾರಿಗೆ ತಂದಿದೆ.
ಭೂ ಸುರಕ್ಷಾ ಮತ್ತು ಕಂದಾಯ ದಾಖಲೆಗಳ ಗ್ರಂಥಾಲಯ ಯೋಜನೆಯಲ್ಲಿ ಶತಮಾನದ ಭೂ ದಾಖಲೆ ಡಿಜಿಟಲೀಕರಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಎ ಮತ್ತು ಬಿ ವರ್ಗದ 100 ಕೋಟಿ ಪುಟಗಳನ್ನು ಸ್ಕಾೃನ್ ಮಾಡಿ ಅಪ್‌ಲೋಡ್ ಮಾಡಲಾಗುತ್ತಿದೆ. ಪ್ರಸ್ತುತ ೆ.27ರ ಅಂತ್ಯಕ್ಕೆ 71.19 ಕೋಟಿ ಪುಟಗಳು ಭೂ-ಸುರಕ್ಷಾ ತಂತ್ರಾಂಶಕ್ಕೆ ಸೇರಿಕೊಂಡಿವೆ.
ರಾಜ್ಯದ 236 ತಾಲೂಕುಗಳ ಪೈಕಿ 102 ತಾಲೂಕು ಕಚೇರಿಗಳಲ್ಲಿ ಹಳೇ ದಾಖಲೆ ಸ್ಕಾೃನಿಂಗ್ ಮತ್ತು ಅಪ್‌ಲೋಡ್ ಪೂರ್ಣವಾಗಿದೆ. ಉಳಿದ 130 ತಾಲೂಕು ಕಚೇರಿಗಳಲ್ಲಿ ಪ್ರಗತಿಯಲ್ಲಿವೆ. ಸಾರ್ವಜನಿಕರು ಭೂ ದಾಖಲೆ ಸ್ವೀಕರಿಸಲು ಇನ್ನು ಮುಂದೆ ತಹಸೀಲ್ದಾರ್ ಕಚೇರಿಗೆ ಹೋಗುವ ಅಗತ್ಯವಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ದೃಢೀಕರಿಸಿದ ಪತ್ರಗಳನ್ನು ಪಡೆಯಬಹುದು.
ಕಂಪ್ಯೂಟರ್ ಜ್ಞಾನ ಇದ್ದರೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸ್ವೀಕರಿಸಬಹುದು. ಇಲ್ಲವಾದರೆ, ಹತ್ತಿರದ ಅಟಲ್ ಜೀ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ತಾಲೂಕು ಕಚೇರಿಯಲ್ಲಿ 36,52,325 ಪುಟಗಳು, ನಾಡಕಚೇರಿಯಲ್ಲಿ 20,916 ಪುಟಗಳು ಮತ್ತು ಸಿಟಿಜನ್ ಲಾಗಿನ್‌ನಲ್ಲಿ 15,96,848 ಪುಟಗಳನ್ನು ಸಾರ್ವಜನಿಕರು ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಇರುವ ಬಾಪೂಜಿ ಕೇಂದ್ರಗಳಿಗೂ ಸೇವೆ ವಿಸ್ತರಿಸುವ ಗುರಿಯನ್ನು ಕಂದಾಯ ಇಲಾಖೆ ಹೊಂದಿದೆ.
ಎ, ಬಿ ವರ್ಗದ ದಾಖಲೆ
ಭೂ ದಾಖಲೆಯಲ್ಲಿ ಎ,ಬಿ, ಸಿ ಮತ್ತು ಡಿ ವರ್ಗದ ದಾಖಲೆಗಳಾಗಿ ವಿಂಗಡಣೆ ಮಾಡಲಾಗಿದೆ. ಎ ವರ್ಗ ಎಂದರೆ ಶಾಶ್ವತ ದಾಖಲೆ ಮತ್ತು ಬಿ ವರ್ಗದ ದಾಖಲೆ ಎಂದರೆ 30 ವರ್ಷ ಸಂಗ್ರಹಿಸುವುದು ಎಂದು ವರ್ಗೀಕರಣ ಮಾಡಲಾಗಿದೆ. ಎ ಮತ್ತು ಬಿ ವರ್ಗದಲ್ಲಿ ಸಾಗುವಳಿ ಚೀಟಿ, ಪಹಣಿ, ಬಗರ್ ಹುಕಂ, ಮ್ಯುಟೇಶನ್ ಮತ್ತು ಮ್ಯುಟೇಶನ್ ಎಕ್ಸ್‌ಟ್ರಾಕ್ಟ್, ಪಟ್ಟಾ, ಎಡ-ಬಲ ದಾಖಲೆಗಳು ಸೇರಿವೆ. ಇನ್ನು ಸಿ ವರ್ಗದ ದಾಖಲೆಗೆ 5 ವರ್ಷಗಳ ಆಯಸ್ಸು ಮತ್ತು ಡಿ ವರ್ಗದ ದಾಖಲೆಗೆ 1 ವರ್ಷ ಆಯಸ್ಸು ಆಗಿರುವ ಕಾರಣಕ್ಕೆ ಈ ಎರಡು ವರ್ಗದ ದಾಖಲೆಗಳನ್ನು ಸದ್ಯಕ್ಕೆ ಸ್ಕಾೃನಿಂಗ್ ಮಾಡುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂ ದಾಖಲೆ ಸ್ವೀಕರಿಸಲು ಜನರು ತಹಸೀಲ್ದಾರ್ ಕಚೇರಿಗೆ ಅಲೆಯುವ ಪರಿಸ್ಥಿತಿ ಬೇಡ. ಸಮೀಪದ ಅಟಲ್ ಜೀ ಕೇಂದ್ರ, ನಾಡಕಚೇರಿಯಲ್ಲಿ ಅಥವಾ ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ದೃಢೀಕರಿಸಿದ ಪ್ರತಿ ಪಡೆಯಿರಿ.
ಯೋಜನೆಯಡಿ ಸ್ಕಾೃನ್ ಮಾಡಲಾದ ವಿವರ
ಕಚೇರಿ ಕಡತ ರಿಜಿಸ್ಟ್ರಾರ್ ಪುಟ
ಜಿಲ್ಲಾಧಿಕಾರಿ 2,64,098 2,169 1,71,64,763
ತಹಸೀಲ್ದಾರ್ 2,76,514 2,397 2,14,09,343
ತಾಲೂಕು 1,03,37,022 10,27,384 67,34,18,443
ಒಟ್ಟು 1,08,77,634 10,31,950 71,19,92,549
ಭೂ ಸುರಕ್ಷಾ ಯೋಜನೆ ಲಾಭ
-ಜಮೀನು ದಾಖಲೆಗಳ ನಾಶ, ತಿದ್ದುವುದು, ನಕಲಿ ಸೃಷ್ಟಿಗೆ ಬ್ರೇಕ್
-ದಾಖಲೆ ವಿತರಿಸುವಾಗ ಲಂಚ ಸ್ವೀಕಾರ, ಕಿರುಕುಳಕ್ಕೆ ಮುಕ್ತಿ
-ಅಂಗೈಯಲ್ಲಿಯೇ ಭೂ ದಾಖಲೆ ಪಡೆಯಲು ಜನರಿಗೆ ಅನುಕೂಲ
-ಭ್ರಷ್ಟ ಅಧಿಕಾರಿ, ಸಿಬ್ಬಂದಿ, ಏಜೆಂಟ್‌ಗಳ ಹಾವಳಿಗೆ ತಡೆ